Site icon Vistara News

Modi 8 years: ಎಂಟು ವರ್ಷಗಳಲ್ಲಿ ಮೋದಿ ಮಾಡಿದ್ದು ಎಲ್ಲವೂ ಸರಿಯೆ? ಇಲ್ಲ, ಏಕೆಂದರೆ…

ಪ್ರಧಾನಿ ನರೇಂದ್ರ ಮೋದಿ

ವಿಶ್ಲೇಷಣೆ: ರಾಮಸ್ವಾಮಿ ಹುಲಕೋಡು, ಬೆಂಗಳೂರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 8 ವರ್ಷಗಳಲ್ಲಿ ಮಾಡಿದ ಸಾಧನೆ ಹಲವು. ಹಲವಾರು ಕ್ರಾಂತಿಕಾರಕ ಎನಿಸುವ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ದೇಶಕ್ಕೆ ಬಲಿಷ್ಠ ನಾಯಕತ್ವ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಗೆಂದು ಎಂಟು ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರ ಮೇಲಿಟ್ಟಿದ್ದ ನಿರೀಕ್ಷೆಗಳೆಲ್ಲವೂ ಈಡೇರಿವೆಯೇ ಕೇಳಿದರೆ ʼಹೌದುʼ ಎಂದು ನೇರವಾಗಿ ಉತ್ತರಿಸುವುದು ಕಷ್ಟ. ಅಧಿಕಾರದ ಇತಿ-ಮಿತಿಗಳು, ಅವರ ಆಡಳಿತದ ಶೈಲಿ ಅವರಿಗೇ ತೊಡಕಾಗಿರುವುದಂತೂ ನಿಜ.

ಪ್ರಜಾಪ್ರಭುತ್ವದಲ್ಲಿ ಯಾವುದೇ ಮಹತ್ತರ ಬದಲಾವಣೆಗೂ ಚರ್ಚೆ, ಸಂವಾದ, ಸಾಮೂಹಿಕ ತೀರ್ಮಾನ, ಸರ್ವರ ಹಿತದೃಷ್ಟಿ ಬಹಳ ಅವಶ್ಯಕ. ಆದರೆ ಮೋದಿಯ ವ್ಯಕ್ತಿತ್ವಕ್ಕೆ ಇದು ಒಗ್ಗಿದಂತೆ ಕಾಣುತ್ತಿಲ್ಲ. ಹೀಗಾಗಿಯೇ ಅವರ ನಡೆ ʼಸರ್ವಾಧಿಕಾರಿʼ ಹಾದಿ ಎನಿಸದಿರದು. ಸಂಘ ಪರಿವಾರದ ರೈತರ ಸಂಘಟನೆ ಭಾರತೀಯ ಕಿಸಾನ್‌ ಸಂಘದ ವಿರೋಧವನ್ನೂ ಲೆಕ್ಕಿಸದೆ  ಅವರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು , ನಂತರ ಇದ್ದಕ್ಕಿದ್ದಂತೆ ಅದನ್ನು ಹಿಂದಕ್ಕೆ ಪಡೆದಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ.

ಆರ್ಥಿಕ ನೀತಿಯಲ್ಲಿ ಸೋಲು

ಆರ್ಥಿಕ ನೀತಿ ರೂಪಿಸುವಲ್ಲಿ ಮೋದಿ ಎಡವಿದ್ದೇ ಹೆಚ್ಚು. 2016ರಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣದಿಂದ ದೇಶದ ಸಣ್ಣ-ಪುಟ್ಟ ವ್ಯಾಪಾರಿಗಳು, ಜನಸಾಮಾನ್ಯರು ಪಟ್ಟ ಪಾಡು ಜೀವನ ಪರ್ಯಂತ ಮರೆಯಲಾಗದ್ದು. ಕಪ್ಪು ಹಣ ನಿಯಂತ್ರಿಸುವ ಉದ್ದೇಶದಿಂದ 500, 1000 ರೂ. ಮುಖಬೆಲೆಯ ನೋಟುಗಳ ಬಳಕೆಯನ್ನು ನಿಷೇಧಿಸಿದರೂ ಅದರ ಬಿಸಿ ಕಪ್ಪು ಹಣ ಹೊಂದಿದ್ದ ಕುಳಗಳನ್ನು ತಾಕಲೇ ಇಲ್ಲ. ಇಡೀ ಬ್ಯಾಂಕಿಂಗ್‌ ವ್ಯವಸ್ಥೆಯೇ ಹಿಂಬಾಗಿಲ ಮೂಲಕ ಅವರ ನೆರವಿಗೆ ನಿಂತಾಗ ಸಂಕಷ್ಟಕ್ಕೀಡಾಗಿದ್ದ ಸಾಮಾನ್ಯ ಜನರ ಸಿಟ್ಟು ಇನ್ನಷ್ಟು ಹೆಚ್ಚಿತ್ತು. ಈ ನಿರ್ಧಾರದಿಂದ ಬಿದ್ದ ಹೊಡೆತದಿಂದ ದೇಶ ಇನ್ನೂ ಚೇತರಿಸಿಕೊಳ್ಳುತ್ತಲೇ ಇದೆ.

ಇದೊಂದೇ ಅಲ್ಲ, ಕಳೆದ ಎಂಟು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಅನೇಕ ನಿರ್ಧಾರಗಳು ದೇಶದ ಆರ್ಥಿಕತೆಯನ್ನು ದುರ್ಬಲವಾಗಿಸಿವೆ. ಕಳೆದ ಎಂಟು ವರ್ಷಗಳಲ್ಲಿ ಜಿಡಿಪಿ ನೆಲಕಚ್ಚುತ್ತಲೇ ಬಂದಿದೆ. 2020ರ ಜನವರಿಯಲ್ಲಿ ಜಡಿಪಿ ಕಳೆದ 42 ವರ್ಷಗಳಲ್ಲಿಯೇ ಕುಸಿಯದಷ್ಟು ಕೆಳಕ್ಕೆ ಬಿದ್ದಿತ್ತು. ಇನ್ನೊಂದೆಡೆ ಹಣದುಬ್ಬರ ಏರುತ್ತಲೇ ಇದ್ದು ಸಗಟು ಹಣದುಬ್ಬರ ಪ್ರಮಾಣವು ಕಳೆದ ಏಪ್ರಿಲ್‌ನಲ್ಲಿಶೇ. 15.08 ಕ್ಕೆ ತಲುಪಿದೆ. ಇದು 1991ರ ನಂತರದ ಗರಿಷ್ಠ ಪ್ರಮಾಣ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.

ಐಎಂಎಪ್‌ ನೀಡಿದ ಮಾಹಿತಿ

ಇದರ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಸರಿಯಾದ ಸಿದ್ಧತೆ ನಡೆಸದೇ ʼಒಂದು ದೇಶ, ಒಂದೇ ತೆರಿಗೆʼ ನೀತಿಯಡಿ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು. ಇದರಲ್ಲಿನ ಗೊಂದಲಗಳನ್ನು ಬಗೆಹರಿಸುವ ಬದಲಾಗಿ, ತಾನು ಮಾಡಿದ್ದೇ ಸರಿ ಎಂಬ ಹಟಮಾರಿ ಧೋರಣೆಯನ್ನು ಕೇಂದ್ರ ಅನುಸರಿಸಿದ್ದರಿಂದ ವ್ಯಾಪಾರಿಗಳು, ಸಣ್ಣ-ಪುಟ್ಟ ಉದ್ಯಮಿಗಳು ಕಷ್ಟಕ್ಕೆ ಸಿಲುಕಿಕೊಂಡರು. ಈಗಲೂ ಜಿಎಸ್‌ಟಿಯ ಬಗ್ಗೆ ವ್ಯಾಪಾರಿ ವಲಯದ ಆಕ್ಷೇಪಣೆಗಳನ್ನು ಬಗೆಹರಿಸಲಾಗಿಲ್ಲ.

ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ದೇಶದ ಅನೇಕ ಖ್ಯಾತ ಆರ್ಥಿಕ ತಜ್ಞರು ಟೀಕಿಸಿದ್ದಾರೆ. ಸ್ವದೇಶಿ ಆಂದೋಲನದ ನೇತರರು ವಿಮರ್ಶಿಸಿದ್ದಾರೆ. ಬೇರೆಯವರೇಕೆ ಪ್ರಧಾನಿಗಳ ಮುಖ್ಯ ಅರ್ಥಿಕ ಸಲಹೆಗಾರರಾಗಿದ್ದ ಕೆ ವಿ ಸುಬ್ರಮಣಿಯನ್‌ ಅಂತವರೇ ರಾಜೀನಾಮೆ ಬಿಸಾಕಿ ಹೋಗಿದ್ದಾರೆ. ಆದರೂ ಹಳ್ಳ ಹಿಡಿದ ಆರ್ಥಿಕ ನೀತಿಯನ್ನು ಸರಿಪಡಿಸುವತ್ತ ಮೋದಿ ಗಮನ ನೀಡಿಲ್ಲ ಎಂಬ ದೂರುಗಳಿವೆ.

ಹೆಚ್ಚುತ್ತಲೇ ಇದೆ ನಿರುದ್ಯೋಗಿಗಳ ಸಂಖ್ಯೆ

ಒಂದೆಡೆ ಮೋದಿ ಸರ್ಕಾರದ ಅಸಮಂಜಸ ಆರ್ಥಿಕ ನೀತಿಯಿಂದಾಗಿ ಉದ್ಯಮಗಳು, ಕಂಪನಿಗಳು ಮುಚ್ಚಿಕೊಳ್ಳುತ್ತಿವೆ. ದೊಡ್ಡ ದೊಡ್ಡ ಕಂಪನಿಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಮಾತ್ರ ಲಾಭ ಹೆಚ್ಚಿಸಿಕೊಂಡು ಶ್ರೀಮಂತವಾಗುತ್ತಿವೆ. ಉದಾಹರಣೆಗೆ ಒಂದು ದಶಕದ ಹಿಂದೆ 300 ಕೋಟಿಗಳ ಒಡೆಯರಾಗಿದ್ದ ಪ್ರಧಾನಿ ಮೋದಿಯವರ ಆತ್ಮೀಯ ಉದ್ಯಮಿ ಅದಾನಿ ಇಂದು ಏಷ್ಯಾದಲ್ಲಿಯೇ 2ನೇ ಶ್ರೀಮಂತರಾಗಿ ಬೆಳೆದಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ಅವರು 3.71 ಲಕ್ಷ ಕೋಟಿ ಸಂಪಾದಿಸಿದ್ದು, ಅವರ ಆಸ್ತಿ ಹೆಚ್ಚುತ್ತಲೇ ಇದೆ. ಹುರುನ್‌ ಸಿರಿವಂತರ ಪಟ್ಟಿ ಪ್ರಕಾರ ಅವರೀಗ 81 ಬಿಲಿಯನ್‌ ಡಾಲರ್‌ (6.14 ಲಕ್ಷ ಕೋಟಿ ರೂ.) ಆಸ್ತಿ ಹೊಂದಿದ್ದು ವಿಶ್ವದಲ್ಲೇ 12ನೇ ಸ್ಥಾನದಲ್ಲಿದ್ದಾರೆ

ಇದನ್ನೂ ಓದಿ | Visual Info: ಮೋದಿಯ ಪ್ರೀತಿಯ ಅಪ್ಪುಗೆ

ಇನ್ನೊಂದೆಡೆ ಕಳೆದ ಒಂದೇ ವರ್ಷದಲ್ಲಿ ದೇಶದಲ್ಲಿ 12,889 ಕಂಪನಿಗಳು ಮುಚ್ಚಿಕೊಂಡಿವೆ. ರಾಜ್ಯ ಸಭೆಗೆ ಸರ್ಕಾರವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ 2018ರಿಂದ 2021ರ ಜೂನ್‌ ವರಗೆಗೆ ಒಟ್ಟು 2,38, 223 ಕಂಪನಿಗಳು ಮುಚ್ಚಿಕೊಂಡಿವೆ. 42 ಸಾವಿರ ಸಣ್ಣ ಉದ್ದಿಮೆಗಳು ಹೆಸರಿಲ್ಲದಂತಾಗಿವೆ. ಕಳೆದ 8 ವರ್ಷದ ಲೆಕ್ಕಾಚಾರ ಬೇಡ, 2021-22 ನೇ ಸಾಲಿನಲ್ಲಿಯೇ 330 ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಬಾಗಿಲು ಹಾಕಿವೆ.

ಒಟ್ಟಾರೆ ಈ ಬೆಳವಣಿಗೆಗಳಿಂದಾಗಿ ಕಳೆದ 8 ವರ್ಷಗಳಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿ ನಿರೀಕ್ಷೆಯನ್ನು ಮುಟ್ಟೇ ಇಲ್ಲ. ಪರಿಣಾಮ 2013-14ನೇ ಸಾಲಿನಲ್ಲಿ ಶೇ.4.9 ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ದಾಖಲೆಯಷ್ಟು ಅಂದರೆ ಶೇ.7.83ಕ್ಕೆ ಏರಿದೆ. 2014 ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ದೇಶದ ಯುವಜನರಿಗೆ ಉದ್ಯೋಗ ನೀಡುವುದೇ ತಮ್ಮ ಗುರಿ ಎಂದಿದ್ದ ಪ್ರಧಾನಿ ಮೋದಿಯವರಿಗೆ ಆ ಮಾತು ಮರೆತೇ ಹೋಗಿದೆ.

ಇದನ್ನೂ ಓದಿ | ಮೋದಿ ಸರಕಾರಕ್ಕೆ 8 ವರ್ಷ ಭರ್ತಿ, ಮೋದಿ-ಶಾ ಸಾರ‍ಥ್ಯದಲ್ಲಿ ಬಿಜೆಪಿಯ ಜೈತ್ರಯಾತ್ರೆ

ಇನ್ನು ಉದ್ಯೋಗದಲ್ಲಿರುವ ಸರ್ಕಾರಿ ಉದ್ಯೋಗಿಗಳು ಕೂಡ ನೆಮ್ಮದಿಯಿಂದಿಲ್ಲ. ವಿವಿಧ ಕಾರ್ಖಾನೆಗಳಲ್ಲಿನ ಕಾರ್ಮಿಕರ ಪರಸ್ಥಿತಿಯೂ ಬೆಂಕಿಗೆ ಬಿದ್ದ ಹಾಗಾಗಿದೆ. ಕಟ್ಟುನಿಟ್ಟಾಗಿದ್ದ ಕಾರ್ಮಿಕರ ಕಾಯ್ದೆಗಳನ್ನು ಕಸದಬುಟ್ಟಿಗೆ ಹಾಕಿ, ಮಾಲೀಕರ ಪರವಾದ ಕಾಯಿದೆಗಳನ್ನು ಜಾರಿಗೆ ತರಲಾಗಿದೆ. ಸರ್ವಾಜನಿಕ ಉದ್ದಿಮೆಗಳ ಮಾರಾಟ, ಬಿಎಸ್‌ಎನ್‌ಎಲ್‌ನಂತಹ ನಷ್ಟದಲ್ಲಿರುವ ಉದ್ದಿಮೆಗಳನ್ನು ಮುಚ್ಚುವುದು, ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಮತ್ತಿತರ ಕ್ರಮಗಳಿಂದ ಉದ್ಯೋಗಿಗಳು, ಕಾರ್ಮಿಕರು ದಿಕ್ಕುಕಾಣದಂತಾಗಿದ್ದಾರೆ.

ದೇಶ ಕಟ್ಟುವುದು ಎಂದರೆ…

ʼಬಲಿಷ್ಠ ಭಾರತ ಕಟ್ಟುತ್ತೇವೆ ಎಂದೇ ಅಧಿಕಾರ ಹಿಡಿದ ಮೋದಿ ಕಳೆದ 8 ವರ್ಷಗಳಲ್ಲಿ ಭಾರತ ಒಕ್ಕೂಟ ವ್ಯವಸ್ಥೆಗೆ ಹಲವಾರು ಬಾರಿ ಧಕ್ಕೆ ತಂದಿದ್ದಾರೆ. ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಾ, ದೇಶದ ಜನರ ಭಾವನೆಗಳೊಂದಿಗೆ ಆಟವಾಡಿದ್ದಾರೆ. ಏಕ ಭಾಷೆ, ಸಂಸ್ಕೃತಿಯನ್ನು ಹೇರಿಕೆ ಮಾಡುತ್ತಾ ಒಂದಾಗಿದ್ದವರಲ್ಲಿಯೇ ಒಡಕು ಮೂಡಿಸುವುದಕ್ಕೆ ಪ್ರೋತ್ಸಾಹ ನೀಡಿದ್ದಾರೆʼ ಎಂಬೆಲ್ಲಾ ಆರೋಪಗಳಿವೆ. ಮೋದಿ ಮತ್ತವರ ಸರ್ಕಾರದ ಪ್ರತಿನಿಧಿಗಳು ಹಿಂದಿ ಹೇರಿಕೆಯ ವಿಷಯದಲ್ಲಿ ಹೀಗೆ ನಡೆದುಕೊಂಡಿದ್ದೂ ನಿಜ. ಹೊಸ ಶಿಕ್ಷಣ ನೀತಿ ಜಾರಿ ಸೇರಿದಂತೆ ಹಲವಾರು ಕ್ರಾಂತಿಕಾರಕ ಕ್ರಮಗಳ ಅನುಷ್ಠಾನದ ಸಂದರ್ಭದಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅವರು ನಡೆದುಕೊಳ್ಳುತ್ತಿರುವ ರೀತಿ ದೇಶದ ಭವಿಷ್ಯಕ್ಕೆ ಮಾರಕವಾಗಬಹುದು.

ಇದನ್ನೂ ಓದಿ | Modi 8 years: ದೇಶದಲ್ಲಿ ಕ್ರಾಂತಿ ಮಾಡಿದ 8 ಜನೋಪಯೋಗಿ ಯೋಜನೆಗಳು

ಚೀನಾ ಗಡಿಯಲ್ಲಿ ಭಾರತಕ್ಕಾದ ಹಿನ್ನಡೆ, ಜಾಗತಿಕ ಹಸಿವಿನ ಸೂಚ್ಯಂಕ, ಸಂತೋಷದ ಸೂಚ್ಯಂಕ, ಧಾರ್ಮಿಕ ಸಹಿಷ್ಣುತೆ ಸೂಚ್ಯಂಕಗಳಲ್ಲಿ ಭಾರತಕ್ಕಾದ ಹಿನ್ನಡೆ, ಕೆಲವು ವಿದೇಶಾಂಗ ನೀತಿಯಲ್ಲಿನ ಗೊಂದಲ, ಪೆಟ್ರೋಲಿಂ ಉತ್ಪನನಗಳ ಆಮದು ಕಡಿಮೆ ಮಾಡದಿರುವುದು, ದೇಶದ ಉದ್ದಿಮೆಗಳನ್ನು ಬದಿಗೆ ತಳ್ಳಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುತ್ತಿರುವುದು, ಟೀಕಿಸುವವರಿಗೆ, ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವವರ ಮೇಲೆ ಹದ್ದಿನ ಕಣ್ಣಿಟ್ಟು ಹಿಂಸಿಸುವುದು ಹೀಗೆ… ಪ್ರಧಾನಿ ಮೋದಿ ಟೀಕಿಸುವವರ ಬಾಯಿಗೆ ಆಗಾಗ ಆಹಾರವಾಗುತ್ತಲೇ ಇರುತ್ತಾರೆ. ಮುಂದಿನ 2 ವರ್ಷಗಳಲ್ಲಿ ಅವರೆಷ್ಟು ನೇರವಾಗಿ ನಡೆಯುತ್ತಾರೆ ನೋಡಬೇಕಿದೆ!

ಇದನ್ನೂ ಓದಿ | Modi 8 years: ಮೋದಿ – ಶಾ ನೇತೃತ್ವದಲ್ಲಿ ಬಿಜೆಪಿ ಈ ಪರಿ ಬೆಳೆದಿದ್ದು ಹೇಗೆ?

Exit mobile version