Site icon Vistara News

ಮುಂದಿನ ಅವಧಿಗೂ ನಾನೇ ಪ್ರಧಾನಿಯೆಂದು ಪರೋಕ್ಷವಾಗಿ ಹೇಳಿದರಾ ನರೇಂದ್ರ ಮೋದಿ?

ನರೇಂದ್ರ ಮೋದಿಯವರು ಈಗ ಎರಡನೇ ಅವಧಿಗೆ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಅವರಿಗೆ ಈಗ 71 ವರ್ಷ. ಮುಂದಿನ ಅವಧಿಗೂ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಈಗಾಗಲೇ ಒಮ್ಮೆ ಅಮಿತ್‌ ಷಾ ಹೇಳಿದ್ದಾರೆ. ಆದರೆ ಬಿಜೆಪಿಯೇ ಮಾಡಿಕೊಂಡ ಅಲಿಖಿತ ನಿಯಮದ ಪ್ರಕಾರ 75 ವರ್ಷವಾದ ಹಿರಿಯ ನಾಯಕರಿಗೆ ಯಾವುದೇ ಪ್ರಮುಖ ಆಡಳಿತ ಹುದ್ದೆಗಳನ್ನು ನೀಡುವುದಿಲ್ಲ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಆ ಹೊತ್ತಿಗೆ ನರೇಂದ್ರ ಮೋದಿಯವರಿಗೂ 75 ವರ್ಷ ತುಂಬುತ್ತದೆ. ಹಾಗಾಗಿ ಮುಂದಿನ ಅವಧಿಗೆ ನರೇಂದ್ರ ಮೋದಿಯವರೇ ಪ್ರಧಾನಿ ಹೌದಾ-ಅಲ್ಲವಾ ಎಂಬುದಿನ್ನೂ ನಿರ್ಧಾರವಾಗಿಲ್ಲ. ಈ ಮಧ್ಯೆ ಮೋದಿಯವರು ನೀಡಿದ ಹೇಳಿಕೆಯೊಂದು ಕುತೂಹಲ ಮೂಡಿಸಿದೆ. ʼಮುಂದಿನ ಅವಧಿಗೂ ನಾನೇ ಪ್ರಧಾನಮಂತ್ರಿʼ ಎಂದು ಹೇಳಿದಂತಿದೆ ಅವರ ಈ ಮಾತುಗಳು.

ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಗುಜರಾತ್‌ನ ಭರೂಚ್‌ನಲ್ಲಿ ನಡೆದ ಉತ್ಕರ್ಷ ಸಮಾರೋಹ್‌ ಕಾರ್ಯಕ್ರಮದಲ್ಲಿ ವರ್ಚ್ಯುವಲ್‌ ಆಗಿ ಮಾತನಾಡುತ್ತ ಹಳೇ ಘಟನೆಯೊಂದನ್ನು ನೆನಪಿಸಿಕೊಡರು. ಹಿಂದೊಮ್ಮೆ ನಾನು ತುಂಬ ಗೌರವಿಸುವ ಹಿರಿಯ ರಾಜಕೀಯ ನಾಯಕರೊಬ್ಬರು ನನ್ನನ್ನು ಭೇಟಿಯಾದರು. ಅವರು ಪ್ರಮುಖ ಪ್ರತಿಪಕ್ಷವೊಂದರ ಮುಖಂಡರು. ಕೆಲವು ಸಮಸ್ಯೆಗಳ ಬಗ್ಗೆ ನನಗೆ ತಿಳಿಸಿ, ಅದನ್ನು ಪರಿಹರಿಸುವ ಸಲುವಾಗಿ ಬಂದಿದ್ದರು. ಆಗ ನನಗೆ ಒಂದು ಮಾತು ಹೇಳಿದರು. ಮೋದಿ ಜೀ, ನಿಮ್ಮನ್ನು ಈ ದೇಶದ ಜನ ಎರಡು ಬಾರಿ ಪ್ರಧಾನಿಯನ್ನಾಗಿ ಮಾಡಿದ್ದಾರೆ. ಇನ್ನೇನು ಬೇಕು ನಿಮಗೆ? ಇನ್ನೂ ಏನನ್ನು ಮಾಡಲು ನೀವು ಇಚ್ಛಿಸುತ್ತೀರಿ? ಎಂದು ನನ್ನನ್ನು ಪ್ರಶ್ನಿಸಿದರು. ದೇಶಕ್ಕೆ ಎರಡು ಅವಧಿಗೆ ಪ್ರಧಾನಿಯಾಗುವುದೇ ಬಹುದೊಡ್ಡ ಸಾಧನೆ ಎಂಬುದೇ ಅವರ ಅಭಿಪ್ರಾಯವಾಗಿತ್ತು ಮತ್ತು ಧ್ವನಿಯಲ್ಲಿ ಆ ಭಾವ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ | Modi in Europe | ಜರ್ಮನಿ ಚಾನ್ಸಲರ್‌ ಭೇಟಿಯಾದ ಪ್ರಧಾನಿ ಮೋದಿ

ಆದರೆ ನರೇಂದ್ರ ಮೋದಿಯನ್ನು ರೂಪಿಸಿದ್ದು ಗುಜರಾತ್‌ನ ಮಣ್ಣು. ಒಂದು ವಿಭಿನ್ನ ಸತ್ವವನ್ನು ನನ್ನಲ್ಲಿ ಈ ಭೂಮಿ ತುಂಬಿದೆ. ಹಾಗಾಗಿಯೇ, ಇಷ್ಟರವರೆಗೆ ಏನೆಲ್ಲ ಮಾಡಿದೆನೋ ಅದು ಆಯಿತು. ಇನ್ನಾದರೂ ನಾನು ವಿಶ್ರಾಂತಿ ಪಡೆಯಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ನನ್ನ ಕನಸು ಇನ್ನೂ ಪೂರ್ಣವಾಗಬೇಕು. ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದ ಜನಹಿತ ಯೋಜನೆಗಳನ್ನು ಶೇ.100ರಷ್ಟು ಫಲಾನುಭವಿಗಳಿಗೆ ತಲುಪಿಸಬೇಕು. ಅಲ್ಲಿಯವರೆಗೆ ವಿಶ್ರಾಂತಿ ಬಗ್ಗೆ ಯೋಚಿಸಲಾರೆ ಎಂದು ಹೇಳಿದ್ದಾರೆ.  

ನಾನು 2014ರಲ್ಲಿ ಮೊಟ್ಟಮೊದಲಿಗೆ ಪ್ರಧಾನಿ ಹುದ್ದೆಗೆ ಏರಿದಾಗ ಈ ದೇಶದ ಅರ್ಧದಷ್ಟು ಮನೆಗಳಲ್ಲಿ ಶೌಚಗೃಹ, ವಿದ್ಯುತ್‌ ವ್ಯವಸ್ಥೆ ಇರಲಿಲ್ಲ. ಬ್ಯಾಂಕ್‌ ಅಕೌಂಟ್‌ಗಳಿರಲಿಲ್ಲ. ವಿವಿಧ ಲಸಿಕೆಗಳನ್ನು ಹಾಕಿಸಿರಲಿಲ್ಲ. 2014ರಿಂದ ಇಲ್ಲಿಯವರೆಗೆ ನಮ್ಮ ಸತತ ಪ್ರಯತ್ನದಿಂದಾಗಿ ಅದೆಷ್ಟೋ ಯೋಜನೆಗಳು ಇಂದು ಶೇ.100ರ ಗುರಿ ತಲುಪಿವೆ. ಇನ್ನೂ ಹಲವು ಯೋಜನೆಗಳು ಜನರನ್ನು ತಲುಪಬೇಕಾಗಿದೆ ಎಂದಿದ್ದಾರೆ. ಅಂದಹಾಗೇ, ತಮ್ಮ ಬಳಿ ಮಾತನಾಡಿದ ಪ್ರತಿಪಕ್ಷದ ನಾಯಕ ಯಾರು ಎಂಬುದನ್ನು ಅವರು ಉಲ್ಲೇಖಿಸಿಲ್ಲ. ಆದರೆ ಕಳೆದ ತಿಂಗಳು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಶಿವಸೇನೆ ಸಂಸದ ಸಂಜಯ್‌ ರಾವತ್‌ ಮತ್ತು ಅವರ ಕುಟುಂಬದ ವಿರುದ್ಧ ಕೇಂದ್ರ ತನಿಖಾ ದಳಗಳು ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡ ಬಗ್ಗೆ ಚರ್ಚಿಸಿದ್ದರು.

ಇದನ್ನೂ ಓದಿ | ಬಿಜೆಪಿಯೇತರ ಸರ್ಕಾರಗಳಿಂದ ಜನರಿಗೆ ಅನ್ಯಾಯ: ಇಂಧನ ತೆರಿಗೆ ಇಳಿಸಿದ ಬೊಮ್ಮಾಯಿ ಸರ್ಕಾರಕ್ಕೆ ಮೋದಿ ಶ್ಲಾಘನೆ

Exit mobile version