ನವ ದೆಹಲಿ: ಎನ್ಸಿಪಿ ಮುಖಂಡ, ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರು ಕೊಲೆ ಯತ್ನ ಕೇಸ್ವೊಂದರಲ್ಲಿ ಅಪರಾಧಿ ಎಂದು ಸಾಬೀತಾದ ಬೆನ್ನಲ್ಲೇ, ಅವರನ್ನು ಲೋಕಸಭೆಯಿಂದಲೂ ಅನರ್ಹಗೊಳಿಸಲಾಗಿದೆ. ಲೋಕಸಭೆಯ ನೈತಿಕ ಸಮಿತಿ ಈ ಅನರ್ಹ ಆದೇಶ ಹೊರಡಿಸಿದೆ.
2009ರಲ್ಲಿ ನಡೆದಿದ್ದ ಕೊಲೆ ಯತ್ನ ಘಟನೆಯೊಂದರಲ್ಲಿ ಮೊಹಮ್ಮದ್ ಫೈಜಲ್ ಹೆಸರು ಕೇಳಿಬಂದಿತ್ತು. ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವರಾಗಿದ್ದ ಪಿ.ಎಂ.ಸಯ್ಯದ್ (2005ರಲ್ಲಿಯೇ ನಿಧನರಾಗಿದ್ದಾರೆ) ಅವರ ಅಳಿಯ ಪದನಾಥ್ ಸಾಲೀಹ್ ಮೇಲೆ, ಈ ಮೊಹಮ್ಮದ್ ಫೈಜಲ್ ಮತ್ತು ಅವರ ಸಹಚರರು 2009ರ ಲೋಕಸಭೆ ಚುನಾವಣೆ ವೇಳೆ ಹಲ್ಲೆ ನಡೆಸಿದ್ದಾರೆ. ಯಾವುದೋ ರಾಜಕೀಯ ವಿಷಯದ ಕಾರಣಕ್ಕೆ ಈ ಗಲಾಟೆ ನಡೆಸಿದ್ದಲ್ಲದೆ, ಸಾಲೀಹ್ ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿತ್ತು. ಆ ಕೇಸ್ ವಿಚಾರಣೆ ಕಳೆದ ಐದು ವರ್ಷಗಳಿಂದಲೂ ಲಕ್ಷದ್ವೀಪದಲ್ಲಿರುವ ಕವರಟ್ಟಿ ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಲೇ ಇತ್ತು.
ಜನವರಿ 11ರಂದು ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯ ‘ಮೊಹಮ್ಮದ್ ಫೈಜಲ್ ಸೇರಿ ಒಟ್ಟು ನಾಲ್ವರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅದರ ಬೆನ್ನಲ್ಲೇ ಲೋಕಸಭೆಯೂ ಫೈಜಲ್ರನ್ನು ಅನರ್ಹಗೊಳಿಸಿದೆ. ಇನ್ನು 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಫೈಜಲ್ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿತ್ತು.
ಇದನ್ನೂ ಓದಿ: Karwar News | ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್: ಲೋಕಸಭೆ ಸದಸ್ಯ ಅನಂತಕುಮಾರ ಹೆಗಡೆ