Site icon Vistara News

ಮಾಂಸಾಹಾರ ಸೇವನೆ ಮಾಡುವವರಿಗೆ ಸಲಹೆಯೊಂದನ್ನು ಕೊಟ್ಟ ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​

Mohan Bhagwat 1

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​​ಎಸ್​ಎಸ್​)ದ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ‘ಮಾಂಸಾಹಾರ’ ತಿನ್ನುವವರಿಗೆ ಒಂದು ಸಲಹೆ ನೀಡಿದ್ದಾರೆ. ತಿನ್ನುವ ಆಹಾರ ಎಂಬುದು ಅತಿಯಾದ ಹಿಂಸಾಚಾರದಿಂದ ದೊರೆತಿದ್ದಾಗಿರಬಾರದು. ಮಾಂಸ ಸೇವನೆ ಮಾಡುವವರೂ ಒಂದು ಶಿಸ್ತು ಪಾಲಿಸಬೇಕು. ಹೀಗೆ ಮಾಡುವುದರಿಂದ ಅವರ ಮಾನಸಿಕ ಸ್ಥಿತಿಯೂ ಸರಿಯಾಗಿ ಇರುತ್ತದೆ ಎಂದು ಮೋಹನ್ ಭಾಗವತ್​ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್​, ‘ನಾವು ತಿನ್ನುವ ಆಹಾರ ನಮ್ಮ ಮನಸಿನ ಮೇಲೆ ಪ್ರಭಾವ ಬೀರುತ್ತದೆ. ನೀವು ಆಹಾರ ಕ್ರಮದಲ್ಲಿ ತಪ್ಪಿದರೆ, ಜೀವನದಲ್ಲೂ ತಪ್ಪು ದಾರಿಯಲ್ಲೇ ಸಾಗುತ್ತೀರಿ. ಅತ್ಯಂತ ಹೆಚ್ಚಾಗಿ ಮಾಂಸಾಹಾರವನ್ನೇ ಒಳಗೊಂಡಿರುವ ತಾಮಸ ಆಹಾರಗಳನ್ನು ಆದಷ್ಟು ಕಡಿಮೆ ತಿನ್ನಬೇಕು. ತ್ಯಜಿಸಿದರೂ ತೊಂದರೆಯಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ಜನರು ಮಾಂಸಾಹಾರ ತಿನ್ನುವಂತೆ ನಮ್ಮ ದೇಶದಲ್ಲಿಯೂ ಮಾಂಸ ಸೇವನೆ ಮಾಡುವ ಮಂದಿ ಅನೇಕರು ಇದ್ದಾರೆ. ಆದರೆ ಇಲ್ಲಿನ ಅನೇಕರು ಈಗಾಗಲೇ ಹಲವು ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ತಾವು ನಾನ್​ ವೆಜ್​ ತಿನ್ನೋದಿಲ್ಲ ಎಂದು ಹೇಳುವವರೂ ಅನೇಕರು ಇದ್ದಾರೆ. ಈ ಶಿಸ್ತನ್ನು ಎಲ್ಲರೂ ಪಾಲಿಸುವಂತಾಗಬೇಕು. ಮಾಂಸಾಹಾರ ಸೇವನೆಯಲ್ಲಿ ನಿಯಮ ಅನುಸರಿಸಿದರೆ, ಮನಸೂ ಶಾಂತವಾಗಿ, ನೆಮ್ಮದಿಯಿಂದ ಇರುತ್ತದೆ. ಏಕಾಗ್ರತೆಯನ್ನೂ ಸಾಧಿಸಬಹುದು’ ಎಂದು ಮೋಹನ್ ಭಾಗವತ್​ ವಿಶ್ಲೇಷಿಸಿದ್ದಾರೆ.

ಇಡೀ ದೇಶದಲ್ಲಿ ನವರಾತ್ರಿ ಆಚರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮೋಹನ್​ ಭಾಗವತ್​ ಈ ಮಾತುಗಳನ್ನಾಡಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಈ ಸಂದರ್ಭದಲ್ಲಿ ಜನರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ಹಾಗೇ, ಹಲವರು ಉಪವಾಸವನ್ನೂ ಮಾಡುತ್ತಾರೆ. ಹಾಗಿದ್ದಾಗ್ಯೂ ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ನಿಮಿತ್ತವೇ ಮಾಂಸ ಸೇವನೆ ಮಾಡಲಾಗುತ್ತದೆ. ಈ ಮಧ್ಯೆ ಮೋಹನ್​ ಭಾಗವತ್​ ಮಾಂಸಾಹಾರ ಸೇವನೆ ಮಾಡುವುದೇ ಬೇಡ ಎಂದಿಲ್ಲ, ಬದಲಾಗಿ ನಿಯಮಗಳನ್ನು ಪಾಲಿಸಿ ಎಂದಿದ್ದಾರೆ.

ಇದನ್ನೂ ಓದಿ: RSS Chief Bhagwat | ಮೋಹನ್‌ ಭಾಗವತ್‌ರನ್ನು ರಾಷ್ಟ್ರಪಿತ ಎಂದ ಮೌಲ್ವಿ, ಡಿಎನ್‌ಎ ಒಂದೇ ಎಂದೂ ಹೇಳಿಕೆ

Exit mobile version