ನವ ದೆಹಲಿ: ಪ್ರಾಣಿಗಳು ಮತ್ತು ಮನುಷ್ಯರನ್ನು ತುಲನೆ ಮಾಡುವ ಮೂಲಕ, ಜನಸಂಖ್ಯಾ ನಿಯಂತ್ರಣವನ್ನು ಬೆಂಬಲಿಸಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತುಗಳನ್ನು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ವಿ.ಹನುಮಂತ ರಾವ್ ಖಂಡಿಸಿದ್ದಾರೆ. ಎಎನ್‌ಐ ಜತೆ ಮಾತನಾಡಿದ ಹನುಮಂತ ರಾವ್, ʼಕೆಲ ದಿನಗಳ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿಕೆ ನೀಡಿ, ಮುಸ್ಲಿಮ್ ಜನಸಂಖ್ಯೆ ಏರಿಕೆಯಾಗುತ್ತಿದೆ ಎಂದು ಹೇಳಿದ್ದರು. ಇದೀಗ ಮೋಹನ್ ಭಾಗವತ್ ಅಂಥದ್ದೇ ಮಾತುಗಳನ್ನಾಡಿದ್ದಾರೆ. ಉಗ್ರವಾದಿಗಳು, ಪ್ರತ್ಯೇಕತಾವಾದಿಗಳು ಮಾತ್ರ ಇಂಥ ಮಾತುಗಳನ್ನಾಡಲು ಸಾಧ್ಯʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ʼಇವರಿಗೆಲ್ಲ ಹಿಂದು-ಮುಸ್ಲಿಮರ ಮಧ್ಯೆ ವೈಷಮ್ಯ ಬಿತ್ತುವುದಷ್ಟೇ ಗೊತ್ತಿದೆ. ಮೋಹನ್ ಭಾಗವತ್ ಅವರು ಮಾನವರನ್ನು ಪ್ರಾಣಿಗಳಿಗೆ ಹೋಲಿಸುತ್ತಿದ್ದಾರೆ. ಆರ್‌ಎಸ್‌ಎಸ್ ಎಂಬುದೇ ಉಗ್ರವಾದಿʼ ಎಂದು ಹೇಳಿದ್ದಾರೆ.
ಅಸಾದುದ್ದೀನ್ ಓವೈಸಿ ಖಂಡನೆ
ಅಂದು ಯೋಗಿ ಆದಿತ್ಯನಾಥ್ ಅವರು ಜನಸಂಖ್ಯಾ ಸಮತೋಲನದ ಬಗ್ಗೆ ಮಾತನಾಡಿದ್ದನ್ನು ಖಂಡಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇದೀಗ ಮೋಹನ್ ಭಾಗವತ್ ಅವರ ಹೇಳಿಕೆಯನ್ನೂ ಪ್ರತಿರೋಧಿಸಿದ್ದಾರೆ. “ಆರ್‌ಎಸ್‌ಎಸ್‌ನವರು ಜನಸಂಖ್ಯಾ ಸ್ಫೋಟದ ಬಗ್ಗೆ ಮಾತನಾಡುತ್ತಾರೆ. ಆದರೆ ಈ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ತುಟಿಬಿಚ್ಚುವುದಿಲ್ಲ. ದೇಶದಲ್ಲಿ ಶೇ.50ರಷ್ಟು ಮಂದಿ 25 ವರ್ಷದವರಿದ್ದಾರೆ. ಅದರಲ್ಲೆಷ್ಟೋ ಜನ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಅವರಿಗಾಗಿ ಮೋದಿ ಸರ್ಕಾರ ಏನು ಮಾಡಿದೆ?” ಎಂದು ಓವೈಸಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ʼಜನಸಂಖ್ಯೆ ನಿಯಂತ್ರಣ ಮಾಡಬೇಕು ಎಂಬ ಕಾರಣಕ್ಕೆ 2ಮಕ್ಕಳು ಮಾತ್ರ ಎಂಬ ಕಾನೂನು ಜಾರಿಗೆ ತಂದರೆ ನಾವಂತೂ ಖಂಡಿತ ಒಪ್ಪೋದಿಲ್ಲʼ ಎಂದು ಖಡಾಖಂಡಿತವಾಗಿ ಹೇಳಿಕೊಂಡುಬಿಟ್ಟಿದ್ದಾರೆ.
ಇದನ್ನೂ ಓದಿ: ಜನಸಂಖ್ಯಾ ವಿವಾದ: ಪ್ರಾಣಿ, ಮನುಷ್ಯರ ನಡುವಿನ ವ್ಯತ್ಯಾಸ ತಿಳಿಸಿದ ಮೋಹನ್ ಭಾಗವತ್