ನವ ದೆಹಲಿ: ಉದ್ಯಮಿ ಗೌತಮಿ ಅದಾನಿ ಷೇರು ಕುಸಿತದ ವಿಷಯದಲ್ಲಿ ಪ್ರಧಾನಿ ಮೋದಿ ಯಾಕೆ ಮೌನವಾಗಿದ್ದಾರೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ವಕ್ತಾರ ಸಂಜಯ್ ಝಾ ಅವರಿಗೆ ಇನ್ಫೋಸಿಸ್ ಕಂಪನಿಯ ಮಾಜಿ ನಿರ್ದೇಶಕ ಟಿ.ವಿ.ಮೋಹನ್ದಾಸ್ ಪೈ ಅವರು ತಿರುಗೇಟು ಕೊಟ್ಟಿದ್ದಾರೆ. ಅದಾನಿ ವಿಷಯದಲ್ಲಿ ಇವರಿಬ್ಬರ ಮಧ್ಯೆ ಟ್ವೀಟ್ ವಾರ್ ನಡೆಯುತ್ತಿದೆ.
‘ಅದಾನಿಯವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದವರು ಕೆಲವೇ ವಾರದಲ್ಲಿ 38ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ನಿಜಕ್ಕೂ ಊಹಿಸಲೂ ಸಾಧ್ಯವಾಗದಷ್ಟು ದೊಡ್ಡ ಮಟ್ಟದ ಪತನ. ಈ ಬಗ್ಗೆ ಇಡೀ ಮಾರ್ಕೆಟ್ ಮಾತನಾಡುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಯಾವಾಗ ಮಾತಾಡುತ್ತಾರೆ ಎಂದು ಸಂಜಯ್ ಝಾ ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮೋಹನ್ ದಾಸ್ ಪೈ, ‘ಮಾರ್ಕೆಟ್ ಕೊಡುತ್ತದೆ, ಮಾರ್ಕೆಟ್ ಕಸಿಯುತ್ತದೆ, ಮಾರುಕಟ್ಟೆ ಕೆಲಸ ಮಾಡುತ್ತದೆ. ಅಂದಮೇಲೆ ಬೇರೆಯಾರಾದರೂ ಯಾಕೆ ಮಾತನಾಡಬೇಕು’ ಎಂದು ತಿರುಗೇಟು ನೀಡಿದ್ದಾರೆ.
ಮತ್ತೆ ಮೋಹನ್ ದಾಸ್ ಪೈ ಅವರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಸಂಜಯ್ ಝಾ ‘ಸಾಂಸ್ಥಿಕ ಆಡಳಿತ ಮತ್ತು ಪಾರದರ್ಶಕತೆ ಬಗ್ಗೆ ನೀವು ಇನ್ಫೋಸಿಸ್ ಮಂಡಳಿಯಲ್ಲಿ ಎಂದಾದರೂ ಒಮ್ಮೆ ಮಾತನಾಡಿದ್ದೀರಿ ಎಂದು ನಂಬುವುದೇ ಕಷ್ಟ. ನೀವು ಹೀಗೆ ಮಾತನಾಡುತ್ತೀದ್ದೀರಿ ಎಂದರೆ ಒಂದೋ ನೀವು ಅತ್ಯಂತ ಭಯಗೊಂಡಿರಬಹುದು ಅಥವಾ ನಿಮ್ಮ ನೈತಿಕತೆಯೇ ಬಾಗಿರಬಹುದು, ಏನೇ ಆಗಲಿ ನೀವು ಇಂಥ ಮಾತನ್ನಾಡುವುದು ದುರಂತ’ ಎಂದು ಹೇಳಿದ್ದಾರೆ.
ಸಂಜಯ್ ಝಾ ಅವರ ಈ ಟ್ವೀಟ್ಗೆ ಮತ್ತೆ ಮೋಹನ್ ದಾಸ್ ಪೈ ಪ್ರತಿಕ್ರಿಯೆ ನೀಡಿದ್ದಾರೆ. ಸಂಜಯ್, ನೀವು ಡಾಟಾ ಮತ್ತು ಸತ್ಯವನ್ನಿಟ್ಟುಕೊಂಡು ಮಾತನಾಡಬೇಕು. ಅದಾನಿಯವರಿಗೆ ಸರ್ಕಾರ ಏನು ಲಾಭ ಮಾಡಿಕೊಟ್ಟಿದೆ? ಯಾವಾಗ ಲಾಭ ಮಾಡಿಕೊಟ್ಟಿದೆ ಎಂಬುದನ್ನು ಡಾಟಾ ಸಹಿತ ಹೇಳಿ. ಈ ಷೇರು ಕುಸಿತದ ವಿಚಾರವನ್ನು ಸೆಬಿ ತನಿಖೆ ನಡೆಸುತ್ತಿದೆ. ಸ್ವಲ್ಪ ನಿಮ್ಮ ಮೆದುಳನ್ನು ಕೆಲಸ ಮಾಡಲು ಉಪಯೋಗಿಸಿ’ ಎಂದು ಹೇಳಿದ್ದಾರೆ. ಇಷ್ಟಕ್ಕೇ ಟ್ವೀಟ್ ವಾರ್ ಮುಗಿಯಲಿಲ್ಲ. ಸಂಜಯ್ ಝಾ ಮತ್ತೊಂದು ಟ್ವೀಟ್ ಮಾಡಿ, ‘ಅದಾನಿ ಷೇರು ಏರಿಕೆಯಾಗಿ, ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದನ್ನು ನೀವು ಸಾಮಾನ್ಯ ಎಂದು ಭಾವಿಸುತ್ತೀರಾ? ಆಗ ಪ್ರಧಾನಿ, ಹಣಕಾಸು ಮಂತ್ರಿ, ಸೆಬಿ (SEBI), ಆರ್ಬಿಐ, ಡಿಆರ್ಐಗಳೆಲ್ಲ ಎಲ್ಲಿ ಹೋಗಿದ್ದವು? ಈ ವಿಷಯದಲ್ಲಿ ನನ್ನ ಮೆದುಳು ಲೆಕ್ಕಾಚಾರ ಮಾಡಲು ಸೋತಿದೆ. ಆದರೆ ಪೈ ಸಾಹೇಬ್ ಅವರೇ, ನೀವು ನಿಮ್ಮ ಆತ್ಮಸಾಕ್ಷಿಯನ್ನೇ ಮಾರಿಕೊಂಡಿದ್ದೀರಿ. ಅದು ನಿಮಗೂ ಗೊತ್ತಿದೆ ಎಂದು ನನಗೆ ತಿಳಿದಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Gautam Adani | ನೀವು ಪ್ರಧಾನಿ ಮೋದಿಯವರ ಪರಮಾಪ್ತರೇ? ಎಂಬ ಪ್ರಶ್ನೆಗೆ ಉದ್ಯಮಿ ಗೌತಮ್ ಅದಾನಿ ನೀಡಿದ ಉತ್ತರ..