ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (WBSSC) ನೇಮಕಾತಿ ಹಗರಣ ಕೇಸ್‌ನಲ್ಲಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯ ಮೇಲೆ ಇ.ಡಿ. ರೇಡ್ ಆದ ಬೆನ್ನಲ್ಲೇ ಈ ಪ್ರಕರಣದಲ್ಲಿ ಅವರ ಇನ್ನೊಬ್ಬ ಆಪ್ತೆಯ ಹೆಸರು ಕೇಳಿಬರುತ್ತಿದೆ. ಸದ್ಯ ಅರ್ಪಿತಾ ಮತ್ತು ಪಾರ್ಥ ಇಬ್ಬರೂ ಬಂಧಿತರಾಗಿದ್ದಾರೆ. ಪಾರ್ಥ ಚಟರ್ಜಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಇವರ ಮತ್ತೊಬ್ಬ ಆಪ್ತ ಸಹಾಯಕಿಯಾಗಿದ್ದ ಮೊನಾಲಿಸಾ ದಾಸ್ ಕೂಡ ಇ.ಡಿ. ಕಣ್ಗಾವಲಿನಲ್ಲಿ ಇದ್ದಾರೆ. ಮೊನಾಲಿಸಾ ದಾಸ್ ಅವರು ಅಸಾನ್ಸೋಲ್‌ನ ಕಾಜಿ ನಜ್ರುಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕಿ.
ಮೊನಾಲಿಸಾ ದಾಸ್, ಬಿರ್ಬುಮ್ ಮತ್ತು ಶಾಂತಿನಿಕೇತನದಲ್ಲಿ ಒಟ್ಟು 30 ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ. ಈಕೆ ಪದೇಪದೆ ಬಾಂಗ್ಲಾದೇಶಕ್ಕೆ ಭೇಟಿ ಕೊಡುತ್ತಿದ್ದರು ಎಂದು ಬಿಜೆಪಿ ಆರೋಪಿಸಿದೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ನೇಮಕಾತಿ ಹಗರಣದ ಬೇರು ಆಳವಾಗಿದೆ. ಇಲ್ಲಿನ ಭ್ರಷ್ಟಾಚಾರದ ಹಣವೆಲ್ಲ ಜಿಹಾದಿಗಳಿಗೆ ಹೋಗಿರಬಹುದು ಅಥವಾ ಹವಾಲಾದ ಮೂಲಕ ಬಾಂಗ್ಲಾದೇಶಕ್ಕೆ ಹೋಗಿರಬಹುದು ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮದ ಬಗ್ಗೆ ವಿವಿಧ ಸ್ವರೂಪದ ತನಿಖೆ ನಡೆಸಿದಾಗ ಅದರಲ್ಲಿ ಮೊನಾಲಿಸಾ ದಾಸ್ ಹೆಸರೂ ಕೇಳಿಬಂದಿದೆ ಎಂದು ಇ.ಡಿ. ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಂದಹಾಗೇ, ಜುಲೈ 24ರಂದು ಬಂಧಿತರಾದ ಅರ್ಪಿತಾರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಶಿಕ್ಷಕರ ನೇಮಕಾತಿ ನಡೆಸುವಾಗ ಉದ್ಯೋಗಾಕಾಂಕ್ಷಿಗಳಿಂದ ಹೇಗೆ ಹಣ ಸಂಗ್ರಹಿಸಲಾಯಿತು. ಆ ಹಣ ಹೇಗೆ ರಾಜಕರಾಣಿಗಳ ಮಧ್ಯೆ ವರ್ಗಾವಣೆಯಾಯಿತು ಎಂಬಿತ್ಯಾದಿ ಮಾಹಿತಿಗಳನ್ನು ಅರ್ಪಿತಾ ಮುಖರ್ಜಿ ತಿಳಿಸಿದ್ದಾರೆ ಎಂದೂ ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: Video: ಅರ್ಪಿತಾ ಮುಖರ್ಜಿ ಮನೆಯಲ್ಲಿ ಇ ಡಿ ಗೆ ಸಿಕ್ಕ ಹಣ ಸಾಗಿಸಲು ಬಂತು ದೊಡ್ಡದಾದ ಟ್ರಕ್ !