ನವದೆಹಲಿ: ಅಕ್ರಮ ಹಣ ವರ್ಗಾವಣೆ ಸಂಬಂಧ, ಮಾಜಿ ಶಾಸಕರೂ ಆಗಿರುವ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಯನ್ನು (Mukhtar Ansari) ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಬಂಧಿಸಿದೆ. ಅನ್ಸಾರಿಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಅನ್ಸಾರಿ ಅವರನ್ನು ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿರಿಸಲಾಗಿತ್ತು.
ಪೂರ್ವ ಉತ್ತರ ಪ್ರದೇಶದ ಘಾಜಿಪುರ ಮೂಲದ ಅನ್ಸಾರಿ, ಮವು ಸದರ್ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದರು. ಎರಡು ಬಾರಿ ಬಿಎಸ್‌ಪಿ ಮತ್ತು ಮೂರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದರು. 2021ರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅನ್ಸಾರಿ ಅವರನ್ನು ವಿಚಾರಣೆ ನಡೆಸಿತ್ತು. ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಸರ್ಕಾರವು ಅನೇಕ ಎಫ್ಐಆರ್‌ಗಳನ್ನು ದಾಖಲು ಮಾಡಿದೆ. ಅದೇ ರೀತಿ, ಅನ್ಸಾರಿ ಪತ್ನಿ ನಡೆಸುತ್ತಿರುವ ವಿಕಾಸ್ ಕನ್ಸ್‌ಟ್ರಕ್ಷನ್ ಕಂಪನಿ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಅನ್ಸಾರಿಯನ್ನು ವಿಚಾರಣೆ ನಡೆಸಲಾಗಿತ್ತು.
ಒಟ್ಟಾರೆ 40 ಪ್ರಕರಣಗಳಿಗೆ ಸಂಬಂಧಿಸಿದಂತೆ ಅನ್ಸಾರಿ ವಿರುದ್ಧ ಇ.ಡಿ. ತನಿಖೆ ನಡೆಸುತ್ತಿದೆ. ಏತನ್ಮಧ್ಯೆ, 2003ರಲ್ಲಿ ಲಖನೌ ಜಿಲ್ಲಾ ಕಾರಾಗೃಹದಲ್ಲಿ ಜೈಲರ್‌ಗೆ ರಿವಾಲ್ವರ್ ತೋರಿಸಿ, ಬೆದರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಇದನ್ನೂ ಓದಿ | ಇ ಡಿ ರೇಡ್ ಮಧ್ಯೆ ಕಳ್ಳರ ಕೈಚಳಕ; ತನಿಖಾ ಏಜೆನ್ಸಿ ತಲುಪುವ ಮೊದಲೇ ಪಾರ್ಥ ಚಟರ್ಜಿ ಮನೆಗೆ ಕನ್ನ