ನವ ದೆಹಲಿ: ಕೇರಳದಲ್ಲಿ ಈಗಾಗಲೇ ಪ್ರಾರಂಭವಾಗಿರುವ ನೈಋತ್ಯ ಮುಂಗಾರು (Monsoon 2022) ಜೂ.2ಕ್ಕೆ ಕರ್ನಾಟಕ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವೆಡೆ ಮುಂಚಿತವಾಗಿಯೇ ಮಳೆ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಸೇರಿ ಕರ್ನಾಟಕದ ಇನ್ನಿತರ ಕೆಲವು ಜಿಲ್ಲೆಗಳಲ್ಲಿ ಸೋಮವಾರವೇ ಹಳದಿ ಅಲರ್ಟ್ ಘೋಷಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳು, ಉತ್ತರ ಕನ್ನಡ, ಬೆಂಗೂರು ನಗರ ಮತ್ತು ಗ್ರಾಮಾಂತರ, ಹಾಸನ, ಶಿವಮೊಗ್ಗ, ರಾಮನಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇನ್ನೊಂದು ದಿನದಲ್ಲಿ ಮಳೆ ಶುರುವಾಗಬಹುದು ಎಂದೂ ತಿಳಿಸಿದೆ.
ನೈಋತ್ಯ ಮಾನ್ಸೂನ್ ಕೇರಳದಿಂದ ಮೊದಲು ಕರ್ನಾಟಕದ ದಕ್ಷಿಣ ಕರಾವಳಿ ತೀರದಲ್ಲಿರುವ ಜಿಲ್ಲೆಗಳಿಗೆ ಮತ್ತು ಬೆಂಗಳೂರಿಗೆ ಪ್ರವೇಶ ಮಾಡಲಿದೆ. ಅದಾದ ಬಳಿಕ ಉತ್ತರ ಕರ್ನಾಟಕದ ಭಾಗಗಳಿಗೆ ಪ್ರವೇಶ ಮಾಡಲಿದೆ. ಮಾನ್ಸೂನ್ ಪ್ರವೇಶದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದರೂ ರಾಜ್ಯಾದ್ಯಂತ ಜೂನ್ 7ರಿಂದ ಮಳೆಯಾಗಬಹುದು. ಬೆಂಗಳೂರಿನಲ್ಲಿ ಜೂನ್ 3 ಮತ್ತು 4ರಂದು ಭಾರಿ ಮಳೆಯಾಗಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಮಾನ್ಸೂನ್ ಕರ್ನಾಟಕವನ್ನು ಪ್ರವೇಶ ಮಾಡಿದ ಮೇಲೆ ಕರ್ನಾಟಕದ ಕರಾವಳಿ ತೀರ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಸಹಜವಾಗಿಯೇ ಭಾರಿ ಮಳೆಯಾಗುತ್ತದೆ. ಇನ್ನುಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಬಹುದು ಎಂದು ಐಎಂಡಿ ಅಂದಾಜಿಸಿದೆ.
ಇದನ್ನೂ ಓದಿ: South-West Monsoon: ನೈಋತ್ಯ ಮುಂಗಾರು ಕೇರಳ ಪ್ರವೇಶ ವಿಳಂಬ ಸಾಧ್ಯತೆ
ಈ ಬಾರಿ ಎಂದಿಗಿಂತಲೂ ಬೇಗನೇ ಮಾನ್ಸೂನ್ ಭಾರತವನ್ನು ಪ್ರವೇಶಿಸಿದೆ. ಮೇ 16ರಂದು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ನೈಋತ್ಯ ಮುಂಗಾರು ಆಗಮನವಾಗಿದೆ. ಕೇರಳ, ದಕ್ಷಿಣ ತಮಿಳುನಾಡು, ಲಕ್ಷದ್ವೀಪಕ್ಕೆ ಮೇ 29ಕ್ಕೆ ಕಾಲಿಟ್ಟಿದೆ. ಸಾಮಾನ್ಯವಾಗಿ ಪ್ರತಿವರ್ಷ ಜೂನ್ 1ಕ್ಕೆ ಕೇರಳಕ್ಕೆ ಮುಂಗಾರು ಆಗಮನವಾಗಿ, ಕರ್ನಾಟಕ್ಕೆ ಜೂನ್ 5ಕ್ಕೆ ಪ್ರವೇಶವಾಗುತ್ತಿತ್ತು. ಇನ್ನು ಮೂರು ದಿನಗಳ ಕಾಲ ಕೇರಳ, ತಮಿಳುನಾಡು, ಲಕ್ಷದ್ವೀಪದಲ್ಲಿ ಮುಂಗಾರು ದುರ್ಬಲ ಆಗುವುದರಿಂದ ಮಳೆಯ ಪ್ರಮಾಣ ತಗ್ಗಲಿದೆ.
ಇದನ್ನೂ ಓದಿ: South-West Monsoon: ಕೇರಳಕ್ಕೆ ಕಾಲಿಟ್ಟ ಮುಂಗಾರು; ಜೂ.2ಕ್ಕೆ ಕರ್ನಾಟಕ ಪ್ರವೇಶ