Site icon Vistara News

Monsoon Precaution : ಮಳೆಗಾಲದಲ್ಲಿ ವಿದ್ಯುತ್‌ ಅವಘಡ ಆಗದಂತೆ ತಡೆಯಲು ಹೀಗೆ ಮಾಡಿ

lightening

#image_title

ಬೆಂಗಳೂರು: ಈ ಬಾರಿ ತಡವಾಗಿ ಮಳೆಗಾಲ ಆರಂಭವಾಗಿದೆ. ಆದರೆ ಮಳೆ ಯಾವ ರೀತಿ ಸುರಿಯುತ್ತದೆ, ಅದರಿಂದ ಏನೇನು ತೊಂದರೆ ಉಂಟಾಗಬಹುದು ಎನ್ನುವುದು ಹೇಳಲಾಗದು. ಮಳೆಗಾಲಕ್ಕೂ ಮೊದಲೇ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಟ್ಟುಕೊಂಡು ಮುನ್ನೆಚ್ಚರಿಕೆ ಪಾಲಿಸಬೇಕಾದದ್ದು ನಮ್ಮ ಕರ್ತವ್ಯ. ಹಾಗಾದರೆ ಈ ಮಳೆಗಾಲದಲ್ಲಿ ವಿದ್ಯುತ್‌ ಅವಗಢಗಳು ಸಂಭವಿಸದಂತೆ ಮಾಡುವುದಕ್ಕೆ ಏನು (Monsoon Precaution) ಮಾಡಬೇಕು? ಏನು ಮಾಡಿದರೆ ವಿದ್ಯುತ್‌ ಸಮಸ್ಯೆಗಳನ್ನು ಸರಿ ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಹೀಗೆ ಮಾಡಿ:

ಆಂಟಿ-ಸ್ಟಾರ್ಮ್ ತಂತ್ರಜ್ಞಾನ: ಲೈಟ್ನಿಂಗ್ ಅರೆಸ್ಟರ್, ಕಂಡಕ್ಟರ್‌, ಇಡಿ ಹೌಸ್ ಸರ್ಜ್ ಪ್ರೊಟೆಕ್ಟರ್‌ ಮತ್ತು ಇತರ ಅರ್ಥಿಂಗ್ ಉಪಕರಣಗಳನ್ನು ಅಳವಡಿಸುವುದರಿಂದ ನಿಮ್ಮ ಮನೆಗಳಿಗೆ ಮಿಂಚು ಹೊಡೆಯದಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Rain news | ಮಳೆಗೆ ನಾಡು ತತ್ತರ, ರಸ್ತೆ- ಹೊಲ ಮುಳುಗಡೆ, ಪರದಾಡಿದ ಜನತೆ

ಹೆಚ್ಚಿನ ಸಂವೇದನಾಶೀಲತೆಯ RCCB: ಒದ್ದೆಯಾದ ವಿದ್ಯುತ್ ಔಟ್‌ಲೆಟ್‌ಗಳ ಮೂಲಕ ವಿದ್ಯುದಾಘಾತವನ್ನು ತಡೆಗಟ್ಟಲು ನಿಮ್ಮ ಕಟ್ಟಡದ ELCBಗಳನ್ನು RCCBs (Residual Current Circuit Breakers) ಬದಲಾಯಿಸಿಕೊಳ್ಳಿ. ಆಕಸ್ಮಿಕವಾಗಿ ದೇಹದ ಮೂಲಕ ಹರಡುವ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವುದರಲ್ಲಿ RCCBಗಳು ELCB ಗಳಿಗಿಂತ ಉತ್ತಮವಾಗಿವೆ.

ವಾಟರ್‌ಪ್ರೂಫ್‌ ಗೋಡೆ: ಗೋಡೆಗಳಲ್ಲಿನ ಬಿರುಕಿನ ಮೂಲಕ ನೀರು ಒಳಗೆ ನುಗ್ಗಿ ಶಾರ್ಟ್‌ ಸರ್ಕ್ಯೂಟ್‌ ಆಗಬಹುದು. ಹಾಗಾಗಿ ಗೋಡೆಗಳಿಗೆ ವಾಟರ್‌ ಪ್ರೂಫ್‌ ಕೋಟ್‌ ಹೊಡೆಸಿ. ಗೋಡೆಯಲ್ಲಿ ಬಿರುಕುಗಳು ಮತ್ತು ಅಂತರಗಳಿಗೆ, ಸಿಮೆಂಟ್ ಮತ್ತು ಮರಳನ್ನು ಹಾಕಿ ಸರಿ ಮಾಡಿ.

ಸರ್ಜ್ ಸಪ್ರೆಸರ್‌: ನಿಮ್ಮ ಮನೆಗೆ ಸರಿಹೊಂದುವಂತಹ ಹಲವಾರು ತಾಂತ್ರಿಕ ಸಲಕರಣೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಎಲೆಕ್ಟ್ರಿಷಿಯನ್‌ ಅವರೊಂದಿಗೆ ಚರ್ಚಿಸಿ ಸರ್ಜ್‌ ಸಪ್ರೆಸರ್‌ಗಳಂತಹ ತಾಂತ್ರಿಕ ಸೇರ್ಪಡೆಯನ್ನು ಮಾಡಿಸಿಕೊಳ್ಳಿ.

ಮಾಡ್ಯುಲರ್ ಸ್ವಿಚ್‌, ಔಟ್‌ಲೆಟ್‌ಗಳು: ಮಳೆಯ ಸಮಯದಲ್ಲಿ ಗೋಡೆಯಲ್ಲಿ ಮಳೆನೀರು ಸೋರಿಕೆಯಿಂದಾಗಿ ಯಾವಾಗಲೂ ವಿದ್ಯುದಾಘಾತದ ಅಪಾಯವಿರುತ್ತದೆ. ಸ್ವಿಚ್ ಪ್ಲೇಟ್‌ಗಳಲ್ಲಿನ ವ್ಯತ್ಯಯದಿಂದ ಮುಖ್ಯವಾಗಿ ಮಕ್ಕಳು ಮತ್ತು ಇತರರಿಗೆ ವಿದ್ಯುದಾಘಾತವಾಗಬಹುದು. ಮಾಡ್ಯುಲರ್ ಎಲೆಕ್ಟ್ರಿಕಲ್ ಸ್ವಿಚ್‌ಗಳು ಹಾಗೂ ಮುಚ್ಚಿದ ಸಾಕೆಟ್‌ಗಳನ್ನು ಬಳಸಿ. ಒಳ್ಳೆಯ ಗುಣಮಟ್ಟದ ವಸ್ತುಗಳಿಂದ ಅಪಾಯ ಕಡಿಮೆಯಾಗುತ್ತದೆ.

ವಿದ್ಯುತ್‌ ತಂತಿಗೆ ಜಾಗ: ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ವಿದ್ಯುತ್‌ ತಂತಿಗೆ ಮರಗಳು ತಾಕಿಕೊಂಡಿರುತ್ತವೆ. ಈ ರೀತಿ ಇದ್ದಾಗ ಮರಗಳು ಒಂದು ವೇಳೆ ನೆಲಕ್ಕೆ ಬಿದ್ದರೆ ಆಗ ದೊಡ್ಡ ಪ್ರಮಾಣದ ಅಪಾಯವಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮರಗಳನ್ನು ವಿದ್ಯುತ್‌ ತಂತಿಗೆ ತಾಕದಂತೆ ಕಡಿಯುತ್ತಿರಿ.

ಹೀಗೆ ಮಾಡಲು ಹೋಗಬೇಡಿ:

ಕಿಟಕಿಗಳ ಬಳಿ ಔಟ್‌ಲೆಟ್‌: ಕಿಟಕಿ ಅಥವಾ ಬಾಲ್ಕನಿಯಂತಹ ಪ್ರದೇಶದಲ್ಲಿ ಔಟ್‌ಲೆಟ್‌ ಹಾಕಿದರೆ ಮಳೆಯ ನೀರಿನಿಂದಾಗಿ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಔಟ್‌ಲೆಟ್‌ ಹಾಕುವ ಜಾಗದ ಬಗ್ಗೆ ಎಚ್ಚರ ವಹಿಸಿ.

ಕಿಟಕಿಯ ಬಳಿಯೇ ಔಟ್‌ಲೆಟ್‌

ಜೋರಾದ ಮಳೆ ಸಮಯದಲ್ಲಿ ಎಲೆಕ್ಟ್ರಿಕಲ್‌ ವಸ್ತು ಬಳಕೆ: ಜೋರಾದ ಮಳೆ, ಸಿಡಿಲು, ಗುಡುಗು ಇದ್ದಾಗ ನಿಮ್ಮ ಎಲೆಕ್ಟ್ರಿಕ್‌ ವಸ್ತುಗಳ ಮೇಲೆ ನೇರ ಪರಿಣಾಮ ಉಂಟಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಆ ಸಮಯದಲ್ಲಿ ಅವುಗಳನ್ನು ಬಳಸದೆ ದೂರ ಇಡಿ.

ಒದ್ದೆ ಗೋಡೆ ಮುಟ್ಟುವುದು: ಒಂದು ವೇಳೆ ಮಳೆ ಬಂದು ನಿಮ್ಮ ಮನೆಯ ಗೋಡೆ ಒದ್ದೆಯಾಗಿದ್ದರೆ ಅಲ್ಲಿ ವಿದ್ಯುತ್‌ ಸಂಪರ್ಕ ಉಂಟಾಗಿರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ನೀವು ಅದನ್ನು ಮುಟ್ಟದಿರುವುದೇ ಒಳಿತು.

ಎಲೆಕ್ಟ್ರಿಕಲ್ ಘಟಕಗಳನ್ನು ನೀವೇ ದುರಸ್ತಿ ಮಾಡುವುದು: ಎಲ್ಲ ಬರುತ್ತದೆ ಎನ್ನುವ ಜಾಣ್ಮೆಯಿಂದ ವಿದ್ಯುತ್‌ ಸಾಮಾಗ್ರಿಗಳನ್ನು ಸರಿ ಮಾಡಲು ಹೋಗಬೇಡಿ. ಈ ರೀತಿ ಮಾಡಲು ಹೋಗಿ ಅನೇಕರು ಜೀವಕ್ಕೆ ಕುತ್ತು ತಂದುಕೊಂಡಿದ್ದಾರೆ.

ಮೀಟರ್‌ ರೂಮ್‌: ಮಳೆ ಹೆಚ್ಚಾದರೆ ನಿಮ್ಮ ಮನೆಯ ಮೀಟರ್‌ ರೂಮ್‌ ಅಥವಾ ಪಿಲ್ಲರ್‌ ಬಾಕ್ಸ್‌ ಸುತ್ತ ನೀರು ಸಂಗ್ರಹವಾಗಬಹುದು. ಆಗ ನೀವೇ ಅದನ್ನು ಸರಿ ಮಾಡಲು ಹೋಗದೆ ಅಧಿಕಾರಿಗಳು ಮತ್ತು ತಾಂತ್ರಿಕ ತಜ್ಞರಿಗೆ ಮಾಹಿತಿ ತಿಳಿಸಿ.

ಲೋಹದ ಮಾಪ್‌ ಬಳಕೆ: ಎಲೆಕ್ಟ್ರಿಕ್‌ ವಸ್ತುವಿನ ಬಳಿ ನೀರು ಬಿದ್ದಿದೆ ಎಂದಾಕ್ಷಣ ಅದನ್ನು ಸ್ವಚ್ಛ ಮಾಡಲು ಮುಂದಾಗುತ್ತೀರಿ. ಆಗ ಲೋಹದ ಹಿಡಿಕೆಯುಳ್ಳ ಮಾಪ್‌ ಬಳಸಬೇಡಿ. ಹಾಗೆ ಮಾಡಿದರೆ ವಿದ್ಯುತ್‌ ನಿಮ್ಮ ದೇಹಕ್ಕೆ ಸಂಪರ್ಕ ಸಾಧಿಸಿಕೊಳ್ಳಬಹುದು.

ಸ್ಮಾರ್ಟ್‌ಫೋನ್‌, ಚಾರ್ಜರ್‌ ಬಳಕೆ: ಜೋರಾದ ಮಳೆಯ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಅದರ ಚಾರ್ಜರ್‌ ಹಿಡಿದುಕೊಳ್ಳುವುದು ಕೂಡ ಅಪಾಯಕಾರಿಯೇ.

Exit mobile version