Site icon Vistara News

Monsoon Precautions : ಮಳೆಗಾಲದಲ್ಲಿ ಅಪಾಯಗಳಿಂದ ದೂರವಿರಲು ಹೀಗೆ ಮಾಡಿ

Monsoon Precaution

#image_title

ಬೆಂಗಳೂರು: ವರುಣ ದೇವ ಈ ವರ್ಷ ಕೊಂಚ ತಡವಾಗಿ ಆಗಮಿಸಿದ್ದಾನೆ. ಎಲ್ಲೆಲ್ಲೂ ಮಳೆ ಆರಂಭವಾಗಿದೆ. ಪ್ರತಿ ವರ್ಷ ಈ ಮಳೆಗಾಲದಲ್ಲಿ ಹಲವಾರು ರೀತಿಯ ಅವಘಡಗಳಿಂದಾಗಿ ಸಾವನ್ನಪ್ಪುವವರು ನೂರಾರು ಮಂದಿ. ಆದರೆ ಕೆಲವು ಮುನ್ಸೂಚನೆಗಳು ಮತ್ತು ಜಾಗೃತಿ ಇದ್ದರೆ ಅಂತಹ ಅವಘಡಗಳಿಂದ ನಾವು ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಹಾಗಾದರೆ ಈ ವರ್ಷ ಮಳೆಗಾಲದಲ್ಲಿ ನಾವು ಯಾವ ರೀತಿಯಲ್ಲಿ ಜಾಗೃತರಾಗಿರಬೇಕು ಎನ್ನುವುದಕ್ಕೆ ಇಲ್ಲಿದೆ ಕೆಲವು (Monsoon Precautions) ಸಲಹೆಗಳು.

ಎಲೆಕ್ಟ್ರಿಕ್ ವೈರ್‌ಗಳಿಂದ ದೂರವಿರಿ


ಮಳೆ ಜೋರಾಗಿ, ಗಾಳಿಯೂ ಹೆಚ್ಚಾದರೆ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ವಿದ್ಯುತ್‌ ತಂತಿಗಳು ಕೂಡ ರಸ್ತೆ ಮೇಲೆ ಬಿದ್ದು ಬಿಡುತ್ತವೆ. ಅಂತಹ ಸಮಯದಲ್ಲಿ ನೀವು ದಾರಿ ಸರಿ ಮಾಡಲು ಹೋಗಿ ವಿದ್ಯುತ್‌ ತಂತಿಯನ್ನು ಅಥವಾ ಕಂಬವನ್ನು ಮುಟ್ಟಬೇಡಿ. ಹಾಗೆ ಮಾಡಲು ಹೋದರೆ ನಿಮಗೆ ವಿದ್ಯುತ್‌ ಸ್ಪರ್ಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮರ ಉರುಳಿ ಬೀಳುವ ಸಾಧ್ಯತೆಯೂ ಇರುತ್ತದೆ. ಅಂಥ ಸಂದರ್ಭದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಅಥವಾ ಅಧಿಕಾರಿಗಳಿಗೆ ತಿಳಿಸಿ. ಹಾಗೆಯೇ ಮಳೆಗಾಲದ ಸಮಯದಲ್ಲಿ ನಿಮ್ಮ ವಾಹನಗಳನ್ನು ವಿದ್ಯುತ್‌ ಕಂಬಗಳ ಪಕ್ಕದಲ್ಲಿ ನಿಲ್ಲಿಸದಿರಿ.

ಮಳೆ ನೀರಿನಲ್ಲಿ ಆಟ ಬೇಡ


ಮಳೆ ಅಂದರೆ ಎಲ್ಲರಿಗೂ ಇಷ್ಟ. ಹಾಗಾಗಿ ಕೆಲವರು ಮಳೆಯಲ್ಲಿ ನೆನೆಯುತ್ತಿರುತ್ತಾರೆ. ಕೆಲವರು ಮಳೆಯಿಂದ ನಿಂತ ನೀರಿನಲ್ಲಿ ಆಟವಾಡುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಮಳೆಯಿಂದಾಗಿ ನಿಂತ ನೀರಿನಿಂದ ಕೆಲವು ಸೋಂಕುಗಳು ನಿಮಗೆ ತಗುಲಬಹುದು. ಹಾಗೆಯೇ ಆ ನೀರಿಗೆ ಚರಂಡಿ ನೀರು ಕೂಡ ಮಿಶ್ರಣವಾಗುವ ಸಾಧ್ಯತೆಯಿರುವುದರಿಂದ ನಿಮಗೆ ಆರೋಗ್ಯ ಸಮಸ್ಯೆ ಖಚಿತ. ಹಾಗಾಗಿ ಮಳೆ ನೀರಿನ ಸಹವಾಸಕ್ಕೆ ಹೋಗಬೇಡಿ.

ಸೊಳ್ಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ


ಮಳೆ ನೀರು ನಿಂತಾಗ ಸಹಜವಾಗಿಯೇ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಆ ಸೊಳ್ಳೆಗಳು ಮನೆಯೊಳಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿ. ಮನೆಯ ಸುತ್ತಮುತ್ತ ಎಲ್ಲಿಯೂ ಮಳೆಯ ನೀರು ನಿಲ್ಲದಂತೆ ನೋಡಿಕೊಳ್ಳಿ. ಆಗ ಸೊಳ್ಳೆಯ ಕಾಟ ಕಡಿಮೆಯಾಗುತ್ತದೆ. ಹಾಗೊಂದು ವೇಳೆ ಸೊಳ್ಳೆಗಳು ಕಂಡು ಬಂದರೂ ಅವುಗಳಿಂದ ರಕ್ಷಿಸಿಕೊಳ್ಳಲು ಸೊಳ್ಳೆ ಬತ್ತಿ ಇತ್ಯಾದಿ ಸಾಧನಗಳನ್ನು ಬಳಸಿ. ಹೀಗೆ ಸೊಳ್ಳೆ ನಿರೋಧಕ ಸಾಧನಗಳನ್ನು ಬಳಸುವಾಗಲೂ, ಇದರ ಸೈಡ್‌ ಎಫೆಕ್ಟ್‌ ಬಗ್ಗೆ ಗಮನ ಇರಲಿ. ನೆನಪಿರಲಿ: ಸೊಳ್ಳೆಗಳ ಮೂಲಕ ಹಲವಾರು ರೋಗಗಳು ಬಂದು ನಮ್ಮನ್ನು ಕಾಡುತ್ತವೆ.

ವಾಹನ ಚಾಲನೆ ಮಾಡುವಾಗ ಇರಲಿ ಎಚ್ಚರ


ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವುದು ದೊಡ್ಡ ಸಾಹಸವೇ ಸರಿ. ಒಂದು ವೇಳೆ ಜೋರಾಗಿ ಮಳೆ ಸುರಿಯುತ್ತಿದ್ದರೆ ರಸ್ತೆ ಕಾಣದಂತಾಗಿ ನೀವು ರಸ್ತೆ ಬಿಟ್ಟು ಬೇರೆಡೆಗೆ ವಾಹನ ಚಾಲಾಯಿಸುವ ಸಾಧ್ಯತೆಯಿರುತ್ತದೆ. ಹಾಗೆಯೇ ಮುಂದೆ ಬರುವ ವಾಹನಗಳೂ ಕಾಣುವುದಿಲ್ಲವಾದ್ದರಿಂದ ಅವುಗಳಿಗೆ ಡಿಕ್ಕಿ ಹೊಡೆಯುವ ಅಪಾಯವೂ ಇರುತ್ತದೆ. ಅದೇ ರೀತಿಯಲ್ಲಿ ಮಳೆ ನೀರು ರಸ್ತೆ ಮೇಲಿರುವ ಗುಂಡಿಗಳನ್ನು ತುಂಬಿಕೊಳ್ಳುವುದರಿಂದ ನಿಮ್ಮ ಅರಿವಿಗೆ ಬಾರದೆ ನೀವು ಗುಂಡಿಗೆ ವಾಹನವನ್ನು ಇಳಿಸಿಬಿಡಬಹುದು. ಈ ಕಾರಣಗಳಿಂದಾಗಿ ವಾಹನ ಚಲಾಯಿಸುವಾಗ ನಿಧಾನವಾಗಿ, ಅತ್ಯಂತ ಎಚ್ಚರಿಕೆಯಿಂದ ಚಲಾಯಿಸುವುದು ಮುಖ್ಯ. ಭಾರಿ ಮಳೆಯ ಸಂದರ್ಭದಲ್ಲಿ ವಾಹನ ಚಲಾಯಿಸದಿರುವುದೇ ಒಳಿತು. ನೆನಪಿರಲಿ: ಮಳೆಗಾಲದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಮಳೆಗಾಲದಲ್ಲಿ ಸಾಧ್ಯವಾದಷ್ಟು ನಿಧಾನವಾಗಿ ವಾಹನ ಚಲಾಯಿಸಿ.

ಎಲೆಕ್ಟ್ರಿಕ್‌ ಉಪಕರಣ ಬಳಸದಿರಿ


ಮಳೆಗಾಲದಲ್ಲಿ ಸಾಮಾನ್ಯವಾಗಿ ವಿದ್ಯುತ್‌ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ವೋಲ್ಟೇಜ್‌ ಕೂಡ ಏರಿಳಿತವಾಗುತ್ತಿರುತ್ತದೆ. ಹಾಗಾಗಿ ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ ಮೆಷಿನ್‌ನಂತಹ ಎಲೆಕ್ಟ್ರಿಕ್‌ ಸಾಧನಗಳನ್ನು ಅನ್‌ಪ್ಲಗ್‌ ಮಾಡಿಟ್ಟುಕೊಳ್ಳಿ. ಹೆಚ್ಚು ಮಳೆ ಸುರಿಯುವ ಸಮಯದಲ್ಲಿ ಎಲೆಕ್ಟ್ರಿಕ್‌ ಸಾಮಗ್ರಿಗಳನ್ನು ಬಳಸದಿರುವುದು ಒಳಿತು. ಒಂದು ವೇಳೆ ಮನೆಯಲ್ಲಿ ನೀರು ಸೋರಿ ಯಾವುದಾದರೂ ವೈರ್‌ಗಳು ಒದ್ದೆಯಾಗಿದ್ದರೆ ಅವುಗಳನ್ನು ಮುಟ್ಟಲು ಹೋಗಬೇಡಿ, ಶಾಕ್‌ ಹೊಡೆಯುವ ಸಾಧ್ಯತೆ ಇರುತ್ತದೆ.

ಕಿಟಕಿ, ಬಾಗಿಲು ಸರಿಯಿದೆಯೇ?


ಮಳೆ ಶುರುವಾದ ತಕ್ಷಣ ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಭದ್ರವಾಗಿ ಹಾಕಿಬಿಡಿ. ಹೀಗೆ ಮಾಡುವುದರಿಂದ ಮನೆಯೊಳಗೆ ನೀರು ಬರುವುದನ್ನು ತಪ್ಪಿಸಬಹುದು. ಒಂದು ವೇಳೆ ಬಾಗಿಲು ಹಾಕಿದರೂ ನೀರು ಬರುತ್ತಿದ್ದರೆ ಅದನ್ನು ಆದಷ್ಟು ಬೇಗ ಸರಿ ಮಾಡಿಸಿಕೊಳ್ಳಿ. ಮನೆಯೊಳಗೆ ಮಳೆ ನೀರು ಬೀಳುತ್ತಲೇ ಇದ್ದರೆ ಗೋಡೆಗಳು ಒದ್ದೆಯಾಗಿ ಕ್ರಮೇಣ ದುರ್ಬಲವಾಗಿ ಕುಸಿದು ಬೀಳಬಹುದು. ಅಥವಾ ಎಲೆಕ್ಟ್ರಿಕ್‌ ತಂತಿಗಳಿಗೆ ನೀರು ತಗುಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಅಪಾಯ ಸಂಭವಿಸಬಹುದು.

ಜೊತೆಯಲ್ಲೇ ಇರಲಿ ಛತ್ರಿ


ಇಂದು ಮಳೆ ಬರುವ ಹಾಗೆ ಕಾಣುವುದಿಲ್ಲ ಎಂದುಕೊಂಡು ಛತ್ರಿಯನ್ನು ಮನೆಯಲ್ಲೇ ಬಿಟ್ಟು ಹೋಗದಿರಿ. ಹವಾಮಾನ ಯಾವ ಕ್ಷಣದಲ್ಲಾದರೂ ಬದಲಾಗಬಹುದು. ನೀವು ಮನೆಗೆ ವಾಪಸಾಗುವ ಹೊತ್ತಿಗೆ ಭಾರೀ ಮಳೆಯೇ ಸುರಿಯಬಹುದು. ಹಾಗಾಗಿ ಮಳೆಗಾಲದಲ್ಲಿ ಯಾವಾಗಲೂ ಛತ್ರಿಯನ್ನು ನಿಮ್ಮ ಜೊತೆಯೇ ಇಟ್ಟುಕೊಳ್ಳಿ. ವಾಹನ ಚಲಾಯಿಸುವವರಾಗಿದ್ದರೆ ರೈನ್‌ ಕೋಟ್‌ ಇಟ್ಟುಕೊಳ್ಳಿ.
ಹಾಗೆಯೇ ನೀವು ಏನನ್ನೇ ತೆಗೆದುಕೊಂಡು ಹೋಗಬೇಕೆಂದರೂ ಅದನ್ನು ಪ್ಲಾಸ್ಟಿಕ್‌ ಚೀಲದಲ್ಲಿಟ್ಟುಕೊಂಡು ಹೋಗಿ. ಹೀಗೆ ಮಾಡುವುದರಿಂದ, ಯಾವಾಗ ಮಳೆ ಬಂದರೂ ನೀವು ತೆಗೆದುಕೊಂಡು ಹೋಗುತ್ತಿರುವ ವಸ್ತುಗಳು ನೆನೆಯದೆ ಭದ್ರವಾಗಿರುತ್ತವೆ.

ಎಮರ್ಜೆನ್ಸಿ ಕಿಟ್ ಸಿದ್ಧ ಇರಲಿ

ಮಳೆಗಾಲದ ಸಮಯದಲ್ಲಿ ಶೀತ, ಜ್ವರದಂತಹ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಅನಾರೋಗ್ಯ ಕಾಡಿದ ತಕ್ಷಣ ಆಸ್ಪತ್ರೆಗೆ ಹೋಗಲು ಮಳೆ ಬಿಡದೆಯೂ ಇರಬಹುದು. ಹಾಗಾಗಿ ಔಷಧಗಳ ತುರ್ತು ಕಿಟ್‌ ಒಂದನ್ನು ಮನೆಯಲ್ಲಿ ಸಿದ್ಧವಾಗಿರಿಸಿಕೊಳ್ಳಿ. ಥರ್ಮಾಮೀಟರ್‌, ಬ್ಯಾಂಡೇಜ್‌, ಹತ್ತಿ, ಹೀಲಿಂಗ್‌ ಮುಲಾಮು, ಜ್ವರ, ಶೀತದ ಮಾತ್ರೆಗಳು ಅದರಲ್ಲಿರಲಿ. ಹಾಗೆಯೇ ಮಳೆಗಾಲದಲ್ಲಿ ವಿದ್ಯುತ್‌ ಕೈ ಕೊಟ್ಟರೆ ಬಳಕೆ ಮಾಡುವುದಕ್ಕೆ ಬ್ಯಾಟರಿ ಆಧಾರಿತ ದೀಪಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

Exit mobile version