Site icon Vistara News

Rain Water Harvesting : ಮಳೆಯ ನೀರನ್ನು ವೇಸ್ಟ್‌ ಮಾಡದಿರಿ; ಪ್ರತಿ ಮನೆಯಲ್ಲೂ ಇರಲಿ ಇಂಗುಗುಂಡಿ

recharge pit

#image_title

ಬೆಂಗಳೂರು: ಈ ಬಾರಿಯ ಮಳೆಗಾಲ ( Rain Water Harvesting ) ಕೊಂಚ ನಿಧಾನವಾಗಿಯೇ ಕರ್ನಾಟಕದತ್ತ ಹೆಜ್ಜೆ ಹಾಕುತ್ತಿದೆ. ಇನ್ನು ಕೆಲ ದಿನಗಳಲ್ಲಿ ಜೋರಾದ ಮಳೆಗಾಲ ಶುರುವಾಗುವ ಮುನ್ಸೂಚನೆಯಿದೆ. ಧೋ ಎಂದು ಸುರಿವ ಮಳೆಯ ನೀರನ್ನು ಹಾಗೆಯೇ ಬಿಟ್ಟು ಸಮುದ್ರ ಸೇರುವಂತೆ ಮಾಡಿದರೆ ನಮಗೇ ನಷ್ಟ. ಆಗಸದಿಂದ ಸುರಿವ ಮಳೆಯ ನೀರನ್ನು ಭೂಮಿಯಲ್ಲೇ ಇಂಗುವಂತೆ ಮಾಡಿ ಅದರಿಂದ ಅಂತರ್ಜಲ ಹೆಚ್ಚಿಸಿಕೊಂಡರೆ ಮುಂದೆ ನಮಗೇ ಅನುಕೂಲ.

ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ. ಮಳೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಈಗಾಗಲೇ ಹಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಹಾಗಾಗಿ ಇಂಗುಗುಂಡಿಗಳು ನಮಗೆ ಅನಿವಾರ್ಯ.

ಹಾಗಾದರೆ ಈ ಇಂಗುಗುಂಡಿಯನ್ನು ಹೇಗೆ ಮಾಡಬೇಕು? ಯಾವ ರೀತಿಯಲ್ಲಿ ಮಾಡಬೇಕು? ಎನ್ನುವ ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ಅದಕ್ಕೆ ಇಲ್ಲಿದೆ ಉತ್ತರ.

ಇದನ್ನೂ ಓದಿ: Viral News: Monsoon Footwear Fashion: ಮಳೆಗಾಲಕ್ಕೆ ತಕ್ಕಂತೆ ಬದಲಾಗುವ ಫುಟ್‌ವೇರ್‌ ಸ್ಟೈಲಿಂಗ್‌ಗೆ ಸೈ ಎನ್ನಿ!
ಮನೆಯ ಚಾವಣಿಯ ಮೇಲೆ ಬೀಳುವ ನೀರನ್ನೇ ನೀವು ಇಂಗುಗುಂಡಿಯಲ್ಲಿ ಇಂಗಿಸಬಹುದು. ಮೊದಲಿಗೆ ಒಂದರಿಂದ ಎರಡು ಮೀಟರ್‌ನಷ್ಟು ಅಗಲ ಮತ್ತು ಎರಡರಿಂದ ಮೂರು ಮೀಟರ್‌ನಷ್ಟು ದೊಡ್ಡ ಹೊಂಡವನ್ನು ತೆಗೆಯಿರಿ. ಹೊಂಡ ವೃತ್ತಾಕಾರದಲ್ಲಾದರೂ ಇರಬಹುದು ಅಥವಾ ಚೌಕಾಕಾದರಲ್ಲಾದರೂ ಇರಬಹುದು. ನಿಮಗೆ ಲಭ್ಯವಿರುವ ಜಾಗಕ್ಕೆ ಯಾವುದು ಸೂಕ್ತವೆನಿಸುತ್ತದೆಯೋ ಅದರಂತೆ ಗುಂಡಿ ತೆಗೆಯಿರಿ.

ಇಂಗುಗುಂಡಿಯ ಮಾದರಿ

ಗುಂಡಿಯ ಕೆಳಗೆ ಮಧ್ಯಮ ಗಾತ್ರದ ಜಲ್ಲಿ ಕಲ್ಲುಗಳನ್ನು ಸುರಿಯಿರಿ. ಸುಮಾರು ಮುಕ್ಕಾಲು ಅಡಿಯಿಂದ ಒಂದು ಅಡಿಯಷ್ಟಾಗುವಷ್ಟು ಜಲ್ಲಿ ಕಲ್ಲುಗಳನ್ನು ಸುರಿಯಿರಿ. ಅದರ ಮೇಲ್ಭಾಗದಲ್ಲಿ ಸಣ್ಣ ಗಾತ್ರದ ಜಲ್ಲಿ ಕಲ್ಲುಗಳನ್ನು ಇನ್ನೊಂದು ಪದರವಾಗುವಂತೆ ಹಾಕಿ. ಈ ಎರಡೂ ಪದರಗಳ ಮೇಲ್ಭಾಗದಲ್ಲಿ ಮತ್ತೊಂದು ಪದರವಾಗುವಷ್ಟು ಮರಳನ್ನು ಪೇರಿಸಿ.

ಮನೆಯ ಚಾವಣಿಯ ಮೇಲೆ ಬಿದ್ದ ನೀರು ಈ ಗುಂಡಿಗೆ ಬಂದು ಬೀಳುವಂತೆ ಪೈಪ್‌ ವ್ಯವಸ್ಥೆ ಮಾಡಿ. ಗುಂಡಿಗೆ ಬಿದ್ದ ನೀರು ಈ ಮೂರು ಪದರಗಳನ್ನು ದಾಟಿ ಹೋಗುವಷ್ಟರಲ್ಲಿ ಸ್ವಚ್ಛ ನೀರಾಗಿ ಅಂತರ್ಜಲ ಸೇರಿಕೊಳ್ಳುತ್ತದೆ. ಅಂತರ್ಜಲ ಹೆಚ್ಚುವುದರಿಂದಾಗಿ ನಿಮಗೆ ನೀರಿನ ಕೊರತೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Weather Report : ಇನ್ನೂ ಅಬ್ಬರಿಸದ ಮುಂಗಾರು ಮಳೆ; ಆದರೂ ಡೋಂಟ್‌ವರಿ, ತಂಪಾಗಲಿದೆ ಇಳೆ
ಇದೇ ರೀತಿಯಲ್ಲಿ ರಸ್ತೆಗಳ ಮೇಲೆ ಹರಿಯುವ ನೀರನ್ನೂ ನೀವು ಸ್ವಚ್ಛಗೊಳಿಸಿ ಇಂಗುಗುಂಡಿಗೆ ಸೇರಿಸಬಹುದು. ಆದರೆ ರಸ್ತೆ ಮೇಲೆ ಹರಿಯುವ ನೀರಿನಲ್ಲಿ ಹೆಚ್ಚಿನ ಕೊಳಕು ಸೇರಿಕೊಂಡಿರುತ್ತದೆಯಾದ್ದರಿಂದ ಅದನ್ನು ಮುತುವರ್ಜಿಯಿಂದ ಸ್ವಚ್ಛ ಮಾಡಬೇಕಾಗುತ್ತದೆ. ಅದಕ್ಕೆಂದೇ ಕೆಲವು ಸಾಮಗ್ರಿಗಳೂ ಈಗಾಗಲೇ ಮಾರುಕಟ್ಟೆಯಲ್ಲಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿ.

ನೆನಪಿರಲಿ, ಕೆಲವೊಮ್ಮೆ ನೀವು ಇಂಗುಗುಂಡಿ ಮಾಡುವುದಕ್ಕೆಂದು ಆಯ್ಕೆ ಮಾಡಿಕೊಳ್ಳುವ ಸ್ಥಳ ಅತ್ಯಂತ ಕೆಳಗಿರುವ ಸ್ಥಳವಾಗಿರಬಹುದು. ಆಗ ನಿಮ್ಮ ಇಂಗುಗುಂಡಿಯೊಳಗೆ ಕೊಳಚೆ ನೀರು ಕೂಡ ಸೇರಿಕೊಂಡುಬಿಡಬಹುದು. ಈ ರೀತಿ ಆಗದಂತೆ ನೋಡಿಕೊಳ್ಳಿ. ಹಾಗೆಯೇ ಇಂಗುಗುಂಡಿಯನ್ನು ತೆರೆದೇ ಇಡುವುದರಿಂದ ಪ್ರಾಣಿಗಳು ಅಥವಾ ಮನುಷ್ಯರು ಅದರೊಳಗೆ ಗೊತ್ತಿಲ್ಲದೆ ಬೀಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ನೀರು ಹೋಗುವುದಕ್ಕೆ ಪೈಪ್‌ನ ವ್ಯವಸ್ಥೆ ಮಾಡಿ, ಉಳಿದ ಜಾಗವನ್ನು ಮುಚ್ಚುವ ವ್ಯವಸ್ಥೆ ಮಾಡಿ. ಇಂಗುಗುಂಡಿಗಳಿಂದ ಅಪಾಯ ಆಗದಂತೆ ಎಚ್ಚರ ವಹಿಸಿ.

Exit mobile version