ನವ ದೆಹಲಿ: ಖ್ಯಾತ ಗಾಯಕ ಮತ್ತು ಪಂಜಾಬ್ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಗಡಿಪಾರು ಮಾಡುವಂತೆ ಭಾರತ ಕೆನಡಾಕ್ಕೆ ಸದ್ಯವೇ ಮನವಿ ಸಲ್ಲಿಸಲಿದೆ. ಈಗಾಗಲೇ ಇಂಟರ್‌ಪೋಲ್ ಈ ಸಂಬಂಧ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ಪೂರಕವಾಗಿ ಭಾರತ ತನ್ನ ಮನವಿಯನ್ನು ನೀಡಲಿದೆ.
ಅಂತಾರಾಷ್ಟ್ರೀಯ ಕಾನೂನು ಅನುಷ್ಠಾನ ಏಜೆನ್ಸಿಯಾಗಿರುವ ಇಂಟರ್ ಪೋಲ್ ಅಧಿಕೃತವಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಇದರಲ್ಲಿ ಪಂಜಾಬ್‌ನ ಮುಕ್ತ್ ಸರ್ ಸಾಹಿಬ್‌ನಲ್ಲಿ ಹುಟ್ಟಿದ ಭಾರತೀಯ ರಾಷ್ಟ್ರೀಯತೆ ಹೊಂದಿರುವ 28 ವರ್ಷದ ಸತಿಂದರ್ ಜಿತ್ ಸಿಂಗ್‌ನನ್ನು ಗಡಿಪಾರು ಮಾಡಬೇಕು ಎಂದು ಕೋರಲಾಗಿದೆ. ಜತೆಗೆ ಆತನ ಮೇಲೆ ಇರುವ ಆರೋಪಗಳನ್ನು ಪಟ್ಟಿ ಮಾಡಲಾಗಿದೆ.
2017ರಲ್ಲಿ ಕೆನಡಾಕ್ಕೆ ವಿದ್ಯಾರ್ಥಿಯಾಗಿ ಹೋಗಿರುವ ಗೋಲ್ಡಿ ಬ್ರಾರ್ ಮೂಸೆವಾಲಾನ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಇನ್ನೊಬ್ಬ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಪರವಾಗಿ ಹೇಳಿಕೆ ನೀಡಿದ್ದ.
ಭಾರತದ ಮನವಿಯಲ್ಲಿ ಕೆನಡಾದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೂ ಕೆನಡಾ ಬ್ರಾರ್‌ನನ್ನು ಗಡಿಪಾರು ಮಾಡಲು ನಿಜಕ್ಕೂ ಅನುಮತಿ ನೀಡುತ್ತದೆಯೇ ಎಂದು ಕಾದು ನೋಡಬೇಕು. ಯಾಕೆಂದರೆ, ಬ್ರಾರ್ ಕೆನಡಾದಲ್ಲಿ ಯವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗದೆ ಇರುವುದರಿಂದ ಅವನು ಮೇಲ್ಮನವಿ ಸಲ್ಲಿಸಲು ಕೂಡಾ ಅವಕಾಶವಿದೆ. ಹೀಗಾಗಿ ಕಾನೂನು ಪ್ರಕ್ರಿಯೆ ಆರಂಭಗೊಂಡರೂ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.
ಶಾರ್ಪ್‌ಶೂಟರ್ ಬಂಧನ
ಮೇ 29ರಂದು ಪಂಜಾಬ್‌ನ ಮಾನಸಾ ಜಿಲ್ಲೆಯ ಜವಾಹರ್‌ಕಿ ಗ್ರಾಮದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಎಂಟು ಶಾರ್ಪ್ ಶೂಟರ್‌ಗಳ ಪೈಕಿ ಒಬ್ಬನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಹರ್‌ಕಮಲ್ ರಾಣು ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ. ಈತ ಬತಿಂಡಾ ಮೂಲದವನಾಗಿದ್ದಾನೆ.
ಇದನ್ನೂ ಓದಿ| Moose wala murder ಹಿಂದಿರುವ ಬಿಷ್ಣೋಯಿ, ಗೋಲ್ಡಿ ಬ್ರಾರ್ ಯಾರು? ಸಿಧು ಮೇಲೇಕೆ ಅವರಿಗೆ ಸಿಟ್ಟು?