ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಅಕ್ರಮ ನೇಮಕಾತಿ ಹಗರಣ, ಭ್ರಷ್ಟಾಚಾರ ಕೇಸ್ನಲ್ಲಿ ಬಂಧಿತಳಾಗಿರುವ ಅರ್ಪಿತಾ ಮುಖರ್ಜಿ (ಸಚಿವ ಪಾರ್ಥ ಚಟರ್ಜಿ ಆಪ್ತೆ)ಯನ್ನು ಒಂದೆಡೆ ಇ ಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರೆ, ಇನ್ನೊಂದೆಡೆ ಅವರಿಗೆ ಸೇರಿದ ಮನೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಇಂದು ಕೋಲ್ಕತ್ತಾ ಉಪನಗರ, ಬೆಲ್ಘಾರಿಯಾದಲ್ಲಿರುವ ಅವರ ನಿವಾಸವೊಂದರ ಮೇಲೆ ಇ ಡಿ ಅಧಿಕಾರಿಗಳು ರೇಡ್ ಮಾಡಿದ್ದರು. ಇಲ್ಲಿಯೂ ಕೂಡ 20 ಕೋಟಿ ರೂಪಾಯಿ ನಗದು, ಚಿನ್ನಾಭರಣಗಳು, ಚಿನ್ನದ ಬಾರ್ಗಳು, ಆಸ್ತಿಗೆ ಸಂಬಂಧಪಟ್ಟ ವಿವಿಧ ದಾಖಲೆಗಳು, ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ (ಜುಲೈ 22) ಅರ್ಪಿತಾ ಮನೆ ಮೇಲೆ ದಾಳಿ ನಡೆಸಿದಾಗ 21 ಕೋಟಿ ರೂಪಾಯಿ ನಗದು, 1 ಕೋಟಿ ರೂ.ಮೌಲ್ಯದ ಆಭರಣಗಳು ಸಿಕ್ಕಿದ್ದವು. ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಲು ಆರ್ಬಿಐಗೆ ಸೇರಿದ ದೊಡ್ಡ ಟ್ರಕ್ವೊಂದು ಬಂದಿತ್ತು. ಇಂದು ಮಧ್ಯಾಹ್ನ ಇ ಡಿ ಅಧಿಕಾರಿಗಳು ಅರ್ಪಿತಾ ಅವರ ಬೆಲ್ಘಾರಿಯಾದ ಮನೆಗೆ ಹೋಗಿದ್ದರು. ಜತೆಗೆ ಹಣ ಲೆಕ್ಕ ಮಾಡುವ ಮಷಿನ್ ಕೂಡ ಕೊಂಡೊಯ್ದಿದ್ದರು. ಶನಿವಾರ ಮತ್ತೊಂದು ಫ್ಲ್ಯಾಟ್ನಲ್ಲಿ 2.19 ಕೋಟಿ ರೂಪಾಯಿ ಸಿಕ್ಕಿತ್ತು. ಒಟ್ಟಿನಲ್ಲಿ ಅರ್ಪಿತಾ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ.
ಸಚಿವ ಪಾರ್ಥ ಚಟರ್ಜಿ ಪಶ್ಚಿಮ ಬಂಗಾಳ ಶಿಕ್ಷಣ ಸಚಿವರಾಗಿದ್ದಾಗ ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಅರ್ಹರನ್ನು ಬಿಟ್ಟು, ಅನರ್ಹರಿಗೆ, ಹಣಕೊಟ್ಟವರಿಗೆ ಹುದ್ದೆ ನೀಡಲಾಗಿದೆ. ಈ ಕೇಸ್ನಲ್ಲಿ ಕೋಟ್ಯಂತರ ರೂಪಾಯಿ ಹಣ ಅಕ್ರಮ ವರ್ಗಾವಣೆ ಆಗಿದೆ ಎಂಬ ಆರೋಪದಡಿ ಇಡಿ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದೆ. ಪಾರ್ಥ ಚಟರ್ಜಿ ಕೂಡ ಅರೆಸ್ಟ್ ಆಗಿದ್ದು, ಅವರು ಆರೋಗ್ಯ ಸರಿಯಿಲ್ಲದೆ ಭುವನೇಶ್ವರದ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನನ್ನ ಮನೆ ಮಿನಿ ಬ್ಯಾಂಕ್ ಆಗಿತ್ತು!
ಇ ಡಿ ವಿಚಾರಣೆ ವೇಳೆ ಅರ್ಪಿತಾ ಮುಖರ್ಜಿ ಮಹತ್ವದ ಸಂಗತಿಗಳನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಅರ್ಪಿತಾ ಮನೆಯಲ್ಲಿ ಸಿಕ್ಕ ಕಪ್ಪು ಬಣ್ಣದ ಡೈರಿಯಲ್ಲಿರುವ ವಿಚಾರಗಳನ್ನು ಉಲ್ಲೇಖಿಸಿ ಅರ್ಪಿತಾರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡಿದ ಅರ್ಪಿತಾ, ‘ನನ್ನ ಮನೆಯನ್ನು ಪಾರ್ಥ ಚಟರ್ಜಿ ಒಂದು ಮಿನಿ ಬ್ಯಾಂಕ್ನಂತೆ ಬಳಸಿಕೊಳ್ಳುತ್ತಿದ್ದರು. ದುಡ್ಡು ಕೂಡಿಡುತ್ತಿದ್ದರು. ಆದರೆ ಈ ಮನೆಯಲ್ಲಿ ಎಷ್ಟು ಹಣ ಇಟ್ಟಿದ್ದೇನೆ ಎಂಬ ನಿಖರ ಮಾಹಿತಿಯನ್ನು ಅವರು ನನಗೂ ಕೊಟ್ಟಿರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ ಎಂದು ಇ ಡಿ ಮೂಲಗಳು ತಿಳಿಸಿವೆ. ಅಂದಹಾಗೇ, ಈ ಕೇಸ್ಗೆ ಸಂಬಂಧಪಟ್ಟಂತೆ ಅರ್ಪಿತಾ ಮತ್ತು ಪಾರ್ಥ ಮಧ್ಯೆ ಹಣ ವರ್ಗಾವಣೆಯಾಗಿದೆ, ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಬೆಳಕು ಚೆಲ್ಲುವ ಅನೇಕ ವಿಷಯಗಳು ಡೈರಿಯಲ್ಲಿ ಇದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಸಚಿವ ಪಾರ್ಥ, ಅರ್ಪಿತಾ ಅಕ್ರಮದ ಕತೆ ಹೇಳುವ ಕಪ್ಪು ಡೈರಿ; ತನಿಖೆ ಚುರುಕುಗೊಳಿಸಿದ ಇ ಡಿ