Site icon Vistara News

ಯುದ್ಧ ಪೀಡಿತ ಸುಡಾನ್​​ನಿಂದ 1700 ಭಾರತೀಯರ ರಕ್ಷಣೆ; ಯಾರಿಗೂ ಅಪಾಯವಾಗಲು ಬಿಡೋದಿಲ್ಲವೆಂದ ಕೇಂದ್ರ ಸರ್ಕಾರ

Operation Kaveri

#image_title

ನವ ದೆಹಲಿ: ಯುದ್ಧ ಪೀಡಿತ ಸುಡಾನ್​​ನಲ್ಲಿ (Sudan conflicts) ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ಆಪರೇಶನ್​ ಕಾವೇರಿ (Operation Kaveri) ಶರವೇಗದಿಂದ ನಡೆಯುತ್ತಿದ್ದು, ಇಲ್ಲಿಯವರೆಗೆ 1700 ಭಾರತೀಯರನ್ನು ಸುಡಾನ್​ನಿಂದ ಈಚೆಗೆ ಕರೆದುಕೊಂಡುಬರಲಾಗಿದೆ. ಅದರಲ್ಲಿ ಮೊದಲ ಬ್ಯಾಚ್​​ನಲ್ಲಿ 360 ಜನರು ದೆಹಲಿ ತಲುಪಿದ್ದಾರೆ. ಭಾರತಕ್ಕೆ ಬಂದು ತಲುಪಿದವರೆಲ್ಲ ಅತ್ಯಂತ ಉತ್ಸಾಹದಿಂದ ಭಾರತ್​ ಮಾತಾ ಕಿ ಜೈ, ಆರ್ಮಿ ಜಿಂದಾಬಾದ್, ಪ್ರಧಾನಿ ಮೋದಿ ಜಿಂದಾಬಾದ್​ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ್ದಾರೆ.

ಏಪ್ರಿಲ್​ 15ರಿಂದ ಸುಡಾನ್​ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇದರಿಂದಾಗಿ ಅಲ್ಲಿನ ಜನರು, ಸುಡಾನ್​ನಲ್ಲಿದ್ದ ಭಾರತೀಯರು ಸೇರಿ ವಿವಿಧ ದೇಶಗಳ ಪ್ರಜೆಗಳು ಸಂಕಷ್ಟಕ್ಕೀಡಾಗಿದ್ದಾರೆ. ಸುಡಾನ್​ನಲ್ಲಿ ಕರ್ನಾಟಕದವರೂ ಸೇರಿ ಸುಮಾರು 3400 ಭಾರತೀಯರು ಇದ್ದಾರೆ. ಅವರನ್ನು ರಕ್ಷಿಸಿ ವಾಪಸ್ ದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಕಾರ್ಯಾಚರಣೆ ನಡೆಸುತ್ತಿದೆ. ‘ಭಾರತದ ಒಬ್ಬೇ ಒಬ್ಬ ಪ್ರಜೆಗೆ ಏನೂ ಅಪಾಯವಾಗದಂತೆ ಕರೆತರುವ ಹೊಣೆ ನಮ್ಮದು ಎಂದು ಕೇಂದ್ರ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿನಯ್ ಕ್ವಾಟ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಸುಡಾನ್‌ನಿಂದ ದೇಶಕ್ಕೆ ಬಂದ 360 ಜನ, ಭಾರತ್‌ ಮಾತಾ ಕೀ ಜೈ, ಮೋದಿ ಜಿಂದಾಬಾದ್‌ ಎಂದು ಘೋಷಣೆ

ಆಪರೇಶನ್​ ಕಾವೇರಿಯಡಿ ಪೋರ್ಟ್​ ಸುಡಾನ್​ನಿಂದ ಭಾರತೀಯರನ್ನು ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆತಂದು, ಅಲ್ಲಿಂದ ದೆಹಲಿಗೆ ಕಳಿಸಲಾಗುತ್ತಿದೆ. ಪೋರ್ಟ್ ಸುಡಾನ್​ನಿಂದ ಭಾರತೀಯರನ್ನು ಜೆಡ್ಡಾಕ್ಕೆ ಕರೆತರಲು ಐಎನ್​ಎಸ್​ ಸುಮೇಧಾ ಹಡಗು ಮತ್ತು ಐಎಎಫ್​ ಸಿ 130-ಜೆ ವಿಮಾನವನ್ನು ನಿಯೋಜಿಸಲಾಗಿದೆ. ಜೆಡ್ಡಾಕ್ಕೆ ಬಂದು ತಲುಪುವ ಭಾರತೀಯರನ್ನು ಸ್ವಾಗತಿಸಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವ ವಿ. ಮುರಳೀಧರನ್ ಅವರೇ ಖುದ್ದಾಗಿ ಅಲ್ಲಿಗೆ ತೆರಳಿದ್ದಾರೆ. ಸುಡಾನ್​ನಿಂದ ಪಾರಾಗಿ ಬಂದವರಿಗೆ ಧೈರ್ಯ ತುಂಬುತ್ತಿದ್ದಾರೆ.

Exit mobile version