Site icon Vistara News

ನೀರು ಕೇಳಿದ ಮಗಳ ಬಾಯಿಗೆ ಸ್ಪಿರಿಟ್ ಹಾಕಿದ ತಾಯಿ; ನರ್ಸ್​ ವಿರುದ್ಧದ ಆರೋಪಕ್ಕೆ ಆಸ್ಪತ್ರೆ ಕೊಟ್ಟ ಉತ್ತರವೇನು?

Mother Fed spirit instead of water to Daughter in Tamil Nadu

#image_title

ಮದುರೈ: ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 9ವರ್ಷದ ಹುಡುಗಿಯೊಬ್ಬಳಿಗೆ ಅವಳ ಅಮ್ಮ ನೀರಿನ ಬದಲು ಸ್ಪಿರಿಟ್​​​ ಕುಡಿಸಿದ್ದು (Fed Spirit), ಬಳಿಕ ಆ ಹುಡುಗಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಆ ಅಮ್ಮ ಈಗ ಆಸ್ಪತ್ರೆ ನರ್ಸ್​​ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ಮಗಳು ಅಡ್ಮಿಟ್ ಆಗಿದ್ದ ಕೊಠಡಿಯ ಟೇಬಲ್​ ಮೇಲೆಯೇ ನರ್ಸ್​​ ಸ್ಪಿರಿಟ್​ ಇಟ್ಟು ಹೋಗಿದ್ದಳು. ನಾನು ಅದನ್ನೇ ನೀರು ಎಂದು ಭಾವಿಸಿ ಮಗಳಿಗೆ ಕುಡಿಸಿಬಿಟ್ಟೆ. ಮಗಳ ಸಾವಿಗೆ ನರ್ಸ್​ ಕಾರಣ ಎಂದು ಆಕೆ ಗೋಳಿಡುತ್ತಿದ್ದಾರೆ.

ತಮಿಳುನಾಡಿನ ಮದುರೈ ಸರ್ಕಾರಿ ಆಸ್ಪತ್ರೆಯಲ್ಲಿ ಹೀಗೊಂದು ಘಟನೆ ನಡೆದಿದೆ. 9 ವರ್ಷದ ಹುಡುಗಿ ಬೆಡ್​ ಮೇಲೆ ಮಲಗಿದ್ದವಳಿಗೆ ಬಾಯಾರಿಕೆ ಆಗಿದೆ. ಸಹಜವಾಗಿಯೇ ಜತೆಗಿದ್ದ ಅಮ್ಮನ ಬಳಿ ನೀರು ಬೇಕು ಎಂದಿದ್ದಾಳೆ. ಅಲ್ಲೇ ಪಕ್ಕದ ಟೇಬಲ್​ ಮೇಲಿದ್ದ ಬಾಟಲಿಯಿಂದ ನೀರು ತೆಗೆದು ಅಮ್ಮ ಮಗಳಿಗೆ ಕುಡಿಸಿದ್ದಾಳೆ. ಆದರೆ ಅದು ಸ್ಪಿರಿಟ್ ಆಗಿತ್ತು. ಸ್ಪಿರಿಟ್​​ನ್ನು ಕುಡಿಸುತ್ತಿದ್ದಂತೆ ಮಗಳು ಸಾವನ್ನಪ್ಪಿದಳು ಎಂಬುದು ಅಮ್ಮನ ಆರೋಪ. ಆದರೆ ಆಸ್ಪತ್ರೆ ಅದನ್ನು ನಿರಾಕರಿಸಿದೆ. ಬಾಲಕಿಯ ಪೋಸ್ಟ್​ಮಾರ್ಟಮ್​ ಮಾಡಲಾಗಿದೆ. ಬಾಲಕಿ ಸತ್ತಿದ್ದು ಸ್ಪಿರಿಟ್​ ಕುಡಿದು ಅಲ್ಲ, ಆಕೆಗೆ ಬ್ರೇನ್​ ಹೆಮರೇಜ್​ (ಮಿದುಳಲ್ಲಿ ರಕ್ತ ಹೆಪ್ಪುಗಟ್ಟಿ) ಆಗಿದ್ದರಿಂದ ಜೀವ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ. ಹಾಗೇ, ಶವಪರೀಕ್ಷೆ ವರದಿಯಲ್ಲಿ ಇದನ್ನೇ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: kidnapping case: ಬಾಲಕಿಗೆ ‘ಕಿಡ್ನ್ಯಾಪ್’ ಆಟ; ಡೆಲಿವರಿ ಬಾಯ್‌ಗೆ ಪ್ರಾಣ ಸಂಕಟ

ಈ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಹಿರಿಯ ಮೂತ್ರಪಿಂಡಶಾಸ್ತ್ರಜ್ಞ ‘ಬಾಲಕಿಯ ಬಾಯಿಯ ಬಳಿ ಸ್ಪಿರಿಟ್​ ಇದ್ದಿದ್ದು ಹೌದು. ಆದರೆ ಅದು ಹೊಟ್ಟೆಯೊಳಕ್ಕೆ ಹೋಗಿ ಹಾನಿ ಮಾಡಿಲ್ಲ. ಅತ್ಯಂತ ಕಡಿಮೆ ಪ್ರಮಾಣದ ಸ್ಪಿರಿಟ್​ ಹುಡುಗಿಯ ದೇಹದೊಳಕ್ಕೆ ಹೋಗಿದೆ. ಇದು ಸಾವಿಗೆ ಕಾರಣವಾಗಿಲ್ಲ’ ಎಂದು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯ ಡೀನ್​ ಕೂಡ ಇದನ್ನೇ ಹೇಳಿದ್ದಾರೆ. ‘ಹುಡುಗಿಗೆ ತುಂಬ ದಿನಗಳಿಂದಲೂ ಡಯಾಲಿಸಿಸ್​ ಚಿಕಿತ್ಸೆ ನಡೆಯುತ್ತಿದೆ. ಹೀಗಾಗಿ ನೀರನ್ನು ಕೂಡ ಜಾಸ್ತಿ ಪ್ರಮಾಣದಲ್ಲಿ ಕೊಡುವಂತಿಲ್ಲ. ಆಕೆಗೆ ಬಾಯಾರಿಕೆಯಾದರೂ ಹನಿಹನಿಯಾಗಿಯೇ ನೀರು ಕೊಡಬೇಕು. ಹಾಗೇ, ಆಕೆಯ ಅಮ್ಮ ಕೂಡ ಸ್ವಲ್ಪವೇ ಸ್ಪಿರಿಟ್ ಹಾಕಿದ್ದಾರೆ. ಸ್ಪಿರಿಟ್​​ನಿಂದ ಬಾಲಕಿ ಜೀವ ಹೋಗಿಲ್ಲ’ ಎಂದು ಹೇಳಿದ್ದಾರೆ.

Exit mobile version