ಪೂರ್ವಗೋದಾವರಿ: ಸ್ವಂತ ಮಗನನ್ನೇ ಕೊಲ್ಲಲು ಸುಪಾರಿ ಕೊಟ್ಟ ಮಹಿಳೆ ಅರೆಸ್ಟ್ ಆಗಿದ್ದಾಳೆ. ಆಕೆ ತನ್ನ ಪುತ್ರನನ್ನು ಕೊಲ್ಲಲು, ಕೊಲೆಗೆಡುಕರಿಗೆ 1.30 ಲಕ್ಷ ರೂಪಾಯಿ ಕೊಟ್ಟಿದ್ದಳು. ಈ ಸುಪಾರಿ ಕಿಲ್ಲರ್ಸ್ ಆಕೆಯ ಮಗನ ಮೇಲೆ ಅಟ್ಯಾಕ್ ಕೂಡ ಮಾಡಿದ್ದರು. ಆದರೆ ಆತ ಬದುಕುಳಿದಿದ್ದಾನೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಬಿಕ್ಕಾವೋಲೆ ಎಂಬಲ್ಲಿ ಹೀಗೊಂದು ಘಟನೆ ನಡೆದಿದೆ. ಕನಕದುರ್ಗಾ ಎಂಬ ಮಹಿಳೆ ಇದರಲ್ಲಿ ಮುಖ್ಯ ಆರೋಪಿ. ಸದಾ ಕುಡಿದು ಬಂದು, ಇನ್ನಿಲ್ಲದಂತೆ ಹಿಂಸಿಸುತ್ತಿದ್ದ ಮಗ ವೀರ ವೆಂಕಟ ಶಿವಪ್ರಸಾದ್ನನ್ನು ಕೊಲ್ಲಲು ಈ ತಾಯಿ ತೀರ್ಮಾನಿಸಿಬಿಟ್ಟಿದ್ದಳು. ಹೀಗಾಗಿ ಆಕೆ ಒಂದಷ್ಟು ಕೊಲೆಗೆಡುಕರಿಗೆ ಸುಪಾರಿ ಕೊಟ್ಟಿದ್ದಳು.
ವೀರ ವೆಂಕಟ ಶಿವಪ್ರಸಾದ್ಗೆ ಮದುವೆಯಾಗಿತ್ತು. ಆತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ವಿಪರೀತ ಕುಡಿಯುತ್ತಿದ್ದ. ಮದುವೆಯಾಗಿ ಕೆಲ ದಿನಗಳಲ್ಲೇ ಹೆಂಡತಿಯೊಂದಿಗೂ ಜಗಳವಾಗಿ, ಆಕೆ ಬಿಟ್ಟು ಹೋದಳು. ಬಳಿಕ ಅಮ್ಮನೊಂದಿಗೆ ವಾಸಿಸಲು ಪ್ರಾರಂಭಿಸಿದ. ಅದೆಷ್ಟರ ಮಟ್ಟಿಗೆ ಕುಡಿತ ಅವನಿಗೆ ಅಂಟಿತ್ತು ಎಂದರೆ, ಪ್ರತಿದಿನ ಕಂಠಪೂರ್ತಿ ಕುಡಿದು ಬಂದು ಅಮ್ಮ ಕನಕದುರ್ಗಾರಿಗೆ ಹೊಡೆಯುತ್ತಿದ್ದ. ಇದೇ ಕಾರಣಕ್ಕೆ ಕನಕದುರ್ಗಾ ರೋಸಿಹೋಗಿದ್ದರು. ಆತನನ್ನು ಕೊಲ್ಲಲು ನಿರ್ಧರಿಸಿದಳು. ಈ ಬಗ್ಗೆ ದೂರದ ಸಂಬಂಧಿ ಯೆಡುಕೊಂಡಲು ಅವರೊಂದಿಗೆ ಚರ್ಚೆಯನ್ನೂ ಮಾಡಿದಳು.
ಯೆಡುಕೊಂಡಲು ಅವರು ಸುಪಾರಿ ಕಿಲ್ಲರ್ ವೀರ ವೆಂಕಟ ಸತ್ಯನಾರಾಯಣ ಎಂಬುವನೊಂದಿಗೆ ಮಾತುಕತೆ ನಡೆಸಿದ. ಆ ಸತ್ಯನಾರಾಯಣ 1.50 ಲಕ್ಷ ರೂಪಾಯಿ ಕೊಡಬೇಕು ಎಂದರೂ, ಅಂತಿಮವಾಗಿ 1.30 ಲಕ್ಷ ರೂಪಾಯಿಗೆ ಡೀಲ್ ಕುದುರಿತ್ತು. ಸತ್ಯನಾರಾಯಣ ಮತ್ತು ಬೋಲೆಮ್ ವಂಶಿಕೃಷ್ಣ ಇಬ್ಬರೂ ಸೇರಿ ಶಿವ ಪ್ರಸಾದ್ನನ್ನು ಬಿಕ್ಕಾವೋಲೆಯ ಹೊರಭಾಗದಲ್ಲಿ ಕೊಲ್ಲಲು ಯೋಜನೆ ರೂಪಿಸಿದರು. ಅದರಂತೆ ಕಬ್ಬಿಣದ ರಾಡ್ ತೆಗೆದುಕೊಂಡು ವೀರ ವೆಂಕಟ ಶಿವಪ್ರಸಾದ್ ತಲೆ ಮೇಲೆ ಹೊಡೆದಿದ್ದಾರೆ. ಎಚ್ಚರ ತಪ್ಪಿದ ಅವನನ್ನು ನೋಡಿ, ಆತ ಹೇಗೂ ಸತ್ತ ಎಂದು ಅಲ್ಲಿಂದ ಹೋಗಿದ್ದರು.
ಆದರೆ ಶಿವಪ್ರಸಾದ್ನನ್ನು ರೈಲ್ವೆ ಸಿಬ್ಬಂದಿಯೊಬ್ಬರು ನೋಡಿ, ಆತನನ್ನು ಜಿಜಿಎಚ್ ಆಸ್ಪತ್ರೆಗೆ ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದಾಗ ಮೊದಲು ಶಿವಪ್ರಸಾದ್ ಅಮ್ಮ ಕನಕದುರ್ಗಾಳನ್ನೇ ಪ್ರಶ್ನಿಸಿದರು. ಆಕೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮಗನ ಹಿಂಸೆ ತಾಳಲಾರದೆ ಆತನನ್ನು ಕೊಲ್ಲಲು ನಿರ್ಧರಿಸಿದೆ ಎಂದೂ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Mysore Congress | ನಂಜನಗೂಡು ಕಾಂಗ್ರೆಸ್ ಟಿಕೆಟ್ಗಾಗಿ ಭಾರಿ ಪೈಪೋಟಿ; ನಾಯಕರ ಬೆಂಬಲಿಗರ ನಡುವೆ ಜಟಾಪಟಿ