ಮುಂಬೈ: ಹೆಣ್ಣಿನ ನೋವನ್ನು ಇನ್ನೊಬ್ಬ ಹೆಣ್ಣೇ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ ಎಂದು ಹೇಳುವುದುಂಟು. ಆದರೆ ಎಷ್ಟೋ ಬಾರಿ ಹೆಣ್ಣು ಮಕ್ಕಳ ನೋವನ್ನು ಒಬ್ಬ ಗಂಡೂ ಕೂಡ ಅರ್ಥ ಮಾಡಿಕೊಳ್ಳಬಲ್ಲ ಎನ್ನುವುದನ್ನು ನಾವು ಒಪ್ಪಲೇಬೇಕು. ಅದಕ್ಕೆ ಸಾಕ್ಷಿ ಮಹಾರಾಷ್ಟ್ರದ ಈ ವ್ಯಕ್ತಿ. ಪತಿ ತೀರಿಕೊಂಡ ನಂತರ ಒಬ್ಬಂಟಿಯಾಗಿದ್ದ ತಾಯಿಗೆ ಮರು ಮದುವೆ (Mother’s Marriage) ಮಾಡಿಸಿ, ಜಂಟಿಯಾಗಿಸಿದ ಮಗನ ಕಥೆ ಇದು.
ಇದನ್ನೂ ಓದಿ: Viral News : ಮದುವೆಗೂ ಮೊದಲೇ ವಧುವಿನ ಕೋಣೆಗೆ ತೆರಳಿದ ವರ; ವಿವಾಹವನ್ನೇ ಮುರಿದುಕೊಂಡ ವಧು!
ಕೊಲ್ಹಾಪುರದ ಯುವರಾಜ್ ಶೆಲೆ ಅವರ ತಂದೆ ಐದು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅಂದಿನಿಂದ ಅವರ ತಾಯಿ ರತ್ನ ಒಬ್ಬಂಟಿಯಾಗಿ ಜೀವನ ನಡೆಸಿದ್ದಾರೆ. ಒಬ್ಬಂಟಿಯಾಗಿದ್ದರಿಂದಾಗಿ ಅವರು ಸಾಕಷ್ಟು ಕೊರಗುತ್ತಿದ್ದರಂತೆ. ತಾಯಿಯ ನೋವನ್ನು ಅರ್ಥ ಮಾಡಿಕೊಂಡ ಮಗ ಯುವರಾಜ ತಾಯಿಗೆ ಮತ್ತೊಂದು ಮದುವೆ ಮಾಡಿಸಬೇಕೆಂದು ನಿರ್ಧರಿಸಿದ್ದಾನೆ.
ತಾಯಿಯ ಮರು ಮದುವೆ ಎನ್ನುವುದು ಯುವರಾಜ್‌ಗೆ ಸಣ್ಣ ಸವಾಲಾಗಿರಲಿಲ್ಲ. ಮೊದಲಿಗೆ ಈ ವಿಚಾರದಲ್ಲಿ ಅಮ್ಮನನ್ನು ಒಪ್ಪಿಸಬೇಕಿತ್ತು. ಸಾಕಷ್ಟು ಸಮಯದ ಒತ್ತಾಯದ ನಂತರ ರತ್ನ ಮರುಮದುವೆಗೆ ಒಪ್ಪಿದ್ದಾರೆ. ನಂತರ ಅವರಿಗೆ ಸರಿಹೊಂದುವಂತಹ ವರನನ್ನು ಹುಡುಕಬೇಕಿತ್ತು. ಗಣೇಶ್ ಹೆಸರಿನ ವರ ಸಿಕ್ಕ ನಂತರ ಅವರ ಕುಟುಂಬವನ್ನು ಒಪ್ಪಿಸುವುದಕ್ಕೂ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಈ ಎಲ್ಲ ಕೆಲಸ ಯಶಸ್ವಿಯಾಗಿ ಆದ ನಂತರ ಕೆಲ ವಾರಗಳ ಹಿಂದೆ ರತ್ನ ಹಾಗೂ ಗಣೇಶ್ ಅವರ ಮದುವೆ ಜರುಗಿದೆ. ಅಮ್ಮನನ್ನು ಒಬ್ಬಂಟಿಯಾಗಿ ಇರಲು ಬಿಡದೆ ಜೀವನ ಸಂಗಾತಿಯನ್ನು ಜತೆ ಮಾಡಿಕೊಟ್ಟ ಸಂತಸದಲ್ಲಿದ್ದಾರೆ ಯುವರಾಜ್.