ಕೋಲ್ಕತ್ತ: ʼನನ್ನ ಕಣ್ಣಲ್ಲಿ ಕಾಳಿ ಎಂದರೆ ಮದ್ಯ-ಮಾಂಸ ಸೇವನೆ ಮಾಡುವ ದೇವಿʼ ಎಂದು ಹೇಳಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಇದೀಗ ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ. ಇತ್ತೀಚೆಗೆ ತಮಿಳುನಾಡು ಚಿತ್ರ ನಿರ್ಮಾಪಕಿ, ನಟಿ ಲೀನಾ ಮಣಿಮೇಕಲೈ ಕಾಳಿ ಚಿತ್ರವನ್ನು ಅತ್ಯಂತ ಅಸಭ್ಯವಾಗಿ ಚಿತ್ರಿಸಿ, ಪೋಸ್ಟರ್ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಮೊಯಿತ್ರಾ ಬಳಿ ರಾಷ್ಟ್ರೀಯ ಮಾಧ್ಯಮವೊಂದು ಪ್ರಶ್ನೆ ಕೇಳಿದಾಗ ಅವರು ಲೀನಾರಿಗೆ ಬೆಂಬಲ ಕೊಡುವ ರೀತಿಯಲ್ಲೇ ಮಾತನಾಡಿದ್ದರು. ಆದರೆ ಟಿಎಂಸಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಮಹುವಾ ಮೊಯಿತ್ರಾ ಹೇಳಿಕೆಗೂ, ಪಕ್ಷಕ್ಕೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ನಾವೂ ಕೂಡ ಇಂಥ ಮಾತುಗಳನ್ನು ಒಪ್ಪುವುದಿಲ್ಲ ಎಂದು ಟಿಎಂಸಿ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಅದರ ಬೆನ್ನಲ್ಲೇ ಮೊಯಿತ್ರಾ ಟಿಎಂಸಿ ಟ್ವಿಟರ್‌ನ್ನು ಅನ್‌ಫಾಲೋ ಮಾಡಿದ್ದಾರೆ. ಸದ್ಯ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರನ್ನು ಮಾತ್ರ ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಲೀನಾ ಮಣಿಮೇಕಲೈ ಕಾಳಿ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದು, ಅದರ ಪೋಸ್ಟರ್‌ನ್ನು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬಿಡುಗಡೆ ಮಾಡಿದ್ದರು. ಅದರಲ್ಲಿ ಕಾಳಿಯ ಒಂದು ಕೈಯಲ್ಲಿ ಸಿಗರೇಟ್ ಹಿಡಿಸಲಾಗಿತ್ತು. ಮತ್ತೊಂದು ಕೈಯಲ್ಲಿ ಎಲ್‌ಜಿಬಿಟಿಕ್ಯೂ ಸಮುದಾಯದ ಬಾವುಟ ಇತ್ತು. ಈ ಪೋಸ್ಟರ್‌ಗೆ ಹಿಂದೂ ಸಮುದಾಯದವರ ದೊಡ್ಡಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಅದರ ಬೆನ್ನಲೇ ಮೊಯಿತ್ರಾ ಮಾತನಾಡಿ, ʼದೇವ-ದೇವತೆಗಳನ್ನು ಅವರವರ ಕಲ್ಪನೆಗೆ ತಕ್ಕಂತೆ ಭಾವಿಸಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಸಿಕ್ಕಿಂಗೆ ಹೋದರೆ ಅಲ್ಲಿ ಕಾಳಿಗೆ ವಿಸ್ಕಿಯಿಂದ ನೈವೇದ್ಯ ಮಾಡುತ್ತಾರೆʼ ಎಂದು ಹೇಳಿದ್ದರು. ಇವರ ಈ ಹೇಳಿಕೆಗೆ ಸಿಕ್ಕಾಪಟೆ ವಿರೋಧ ವ್ಯಕ್ತವಾಗಿತ್ತು. ಸ್ವತಃ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಕೂಡ ಒಪ್ಪಿರಲಿಲ್ಲ.
ಇಷ್ಟೆಲ್ಲ ಆದ ಬಳಿಕ ಮಹುವಾ ಮೊಯಿತ್ರಾ ಸ್ಪಷ್ಟನೆ ಕೊಟ್ಟು, ಇಷ್ಟೆಲ್ಲ ಆದ ಬಳಿಕ ಮಹುವಾ ಮೊಯಿತ್ರಾ ಟ್ವಿಟರ್ ಮೂಲಕ ಸ್ಪಷ್ಟನೆ ಕೊಟ್ಟು, ʼಸಂಘಿಗಳಿಗೆ ಒಂದು ವಿಚಾರ ಹೇಳಲು ಬಯಸುತ್ತೇನೆ. ಸುಳ್ಳು ಹೇಳಿದಾಕ್ಷಣ ನೀವೆಲ್ಲ ಕಟ್ಟಾ ಹಿಂದುಗಳು ಎನ್ನಿಸುವುದಿಲ್ಲ. ನಾನು ಯಾವುದೇ ಪೋಸ್ಟರ್‌ನ್ನಾಗಲಿ, ಸಿನಿಮಾವನ್ನಾಗಲೀ, ಧೂಮಪಾನವನ್ನಾಗಲೀ ಬೆಂಬಲಿಸಿಲ್ಲ. ತಾರಾಪಿತ್‌ನಲ್ಲಿರುವ ಕಾಳಿ ಮಾತಾ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ. ಅಲ್ಲಿ ಆಕೆಯ ನೈವೇದ್ಯಕ್ಕೆ ಏನೆಲ್ಲ ಕೊಡಲಾಗುತ್ತದೆ ಎಂಬುದನ್ನು ನೋಡಿ ಎಂದು ಹೇಳಿದ್ದರು.
ಇದನ್ನೂ ಓದಿ: ಕಾಳಿ ಮಾಂಸ, ಮದ್ಯ ಸೇವಿಸುವ ದೇವಿ; ಉರಿಯುತ್ತಿರುವ ವಿವಾದಕ್ಕೆ ಸಂಸದೆ ಮಹುವಾ ಉರುವಲು !