ಮಧ್ಯಪ್ರದೇಶದಲ್ಲಿ ಆಗಾಗ ಜೆಸಿಬಿ ಸದ್ದು ಮಾಡುತ್ತಿರುತ್ತದೆ. ಸಮಾಜ ವಿರೋಧಿ ಕೃತ್ಯ ಮಾಡಿದವರು, ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವವರು, ಕಾನೂನು ಕೈಯಿಗೆ ತೆಗೆದುಕೊಳ್ಳುವವರ ಮನೆ ಎದುರು ಜೆಸಿಬಿ ಬಂದು ನಿಲ್ಲುತ್ತದೆ ಮತ್ತು ಅವರ ಆಸ್ತಿ ನೆಲಸಮ ಆಗುತ್ತದೆ. ವಿವಿಧ ಆರೋಪಿಗಳ ವಿರುದ್ಧ ಮಧ್ಯಪ್ರದೇಶ ಸರ್ಕಾರ ಈಗಾಗಲೇ ಜೆಸಿಬಿ ಅಸ್ತ್ರ ಪ್ರಯೋಗ ಮಾಡಿದ್ದನ್ನು ನಾವು ನೋಡಿದ್ದೇವೆ. ಆದರೆ ಈಗ ಬಿಜೆಪಿ ಸಚಿವರೊಬ್ಬರು ಕಾಂಗ್ರೆಸ್ ನಾಯಕರು/ಕಾರ್ಯಕರ್ತರ ಮೇಲೆ ‘ಜೆಸಿಬಿ ಅಸ್ತ್ರ ಪ್ರಯೋಗ’ ಮಾಡಲು ಹೊರಟಿದ್ದಾರೆ. ನೀವು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಾರದೆ ಇದ್ದರೆ, ಜೆಸಿಬಿ ನಿಮ್ಮ ಮನೆ ಬಳಿ ಬರುತ್ತದೆ. ನಿಮ್ಮ ಆಸ್ತಿಪಾಸ್ತಿಯೂ ಧ್ವಂಸವಾಗುತ್ತದೆ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಈ ಸಚಿವರ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿವೆ.
ಹೀಗೆ ಸಾರ್ವಜನಿಕವಾಗಿ ನಿಂತು ಕಾಂಗ್ರೆಸ್ ನಾಯಕರಿಗೆ ಬೆದರಿಕೆ ಹಾಕಿದ್ದು ಮಧ್ಯಪ್ರದೇಶ ಪಂಚಾಯತ್ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ. ರಾಘೋಗಢ ನಗರದ ಸ್ಥಳೀಯ ಆಡಳಿತದ ಚುನಾವಣೆ ಜನವರಿ 20ರಂದು ನಡೆಯಲಿರುವ ಹಿನ್ನೆಲೆಯಲ್ಲಿ, ಗುಣಾ ಜಿಲ್ಲೆಯ ರುಥಿಯೈ ಪಟ್ಟಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರಲ್ಲೂ ಬಿಜೆಪಿಯೇ ಗೆದ್ದು ಅಧಿಕಾರ ಹಿಡಿಯಲಿದೆ. ಈಗಾಗಲೇ ಸ್ಥಳೀಯ ಆಡಳಿತಗಳ ಚುನಾವಣೆಗಳು ಸಮೀಪಿಸುತ್ತಿವೆ. ನೀವು (ಕಾಂಗ್ರೆಸ್ಸಿಗರು) ನಿಧಾನವಾಗಿ ಬಿಜೆಪಿ ಕಡೆಗೆ ಬನ್ನಿ. ಕೇಸರಿ ಪಾಳೆಯ ಸೇರಿಕೊಳ್ಳಿ. ಇಲ್ಲದಿದ್ದರೆ, ಬುಲ್ಡೋಜರ್ ಸಿದ್ಧವಾಗಿರುತ್ತದೆ’ ಎಂದು ಹೇಳಿದ್ದಾರೆ.
ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಣಾ ಜಿಲ್ಲೆಯ ಕಾಂಗ್ರೆಸ್ ಮುಖ್ಯಸ್ಥ ಹರಿಶಂಕರ್ ಹರಿಶಂಕರ್ ವಿಜಯವರ್ಗಿಯ ಪ್ರತಿಕ್ರಿಯೆ ನೀಡಿ ‘ಸಚಿವರ ಇಂಥ ಮಾತುಗಳು ಬಿಜೆಪಿಯ ಘನತೆಗೇ ಧಕ್ಕೆ ತರುವಂತಿದೆ. ಸಚಿವರಿಗೆ ತಮ್ಮ ಮಾತಿನ ಮೇಲೆ ಹಿಡಿತ ಇರಬೇಕು. ರಾಘೋಗಢ ನಗರದ ಜನರು, ಇಲ್ಲಿನ ಚುನಾವಣೆಯಲ್ಲಿ ಖಂಡಿತವಾಗಿಯೂ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ 4 ಕಾಲುಗಳುಳ್ಳ ಹೆಣ್ಣುಮಗು ಜನನ; ಎರಡು ಪುಟ್ಟ ಕಾಲ್ಗಳು ನಿಷ್ಕ್ರಿಯ