ಲಖನೌ: ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ ರಾಜಕಾರಣಿ, ಈಗಾಗಲೇ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಗೆ (Mukhtar Ansari), ಬಿಜೆಪಿ ಶಾಸಕರಾಗಿದ್ದ ಕೃಷ್ಣಾನಂದ ರೈ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಇಂದು ಗಾಝಿಯಾಪುರದ ಜನಪ್ರತಿನಿಧಿಗಳ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅದರೊಂದಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದೇ ಕೇಸ್ನಲ್ಲಿ ಮುಖ್ತಾರ್ ಅನ್ಸಾರಿ ಸಹೋದರ ಅಫ್ಜಲ್ ಅನ್ಸಾರಿಯನ್ನೂ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇವರೂ ಸಂಸದನೇ ಆಗಿದ್ದಾರೆ.
ಕೃಷ್ಣಾನಂದ ರೈ ಅವರು 2002ರಿಂದ 2005ರವರೆಗೆ ಉತ್ತರ ಪ್ರದೇಶದ ಮವೂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 2005ರಲ್ಲಿ ಇವರ ಅಪಹರಣವಾಗಿ, ಹತ್ಯೆಯಾಗಿತ್ತು. ಗಾಝಿಯಾಬಾದ್ನಲ್ಲಿರುವ ತಮ್ಮ ಹುಟ್ಟೂರಾದ ಗೊಂಡೌರ್ ಹಳ್ಳಿಗೆ ತೆರಳುತ್ತಿದ್ದಾಗ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿ, ಹತ್ಯೆಗೈದಿದ್ದರು. ಕೃಷ್ಣಾನಂದ್ ರೈ ಜತೆ ಅವರ ಆರು ಸಹಾಯಕರ ಹತ್ಯೆಯಾಗಿತ್ತು. ಮುಖ್ತಾರ್ ಅನ್ಸಾರಿಯೇ ಈ ಕೃತ್ಯ ಮಾಡಿಸಿದ್ದ ಎಂಬ ಆರೋಪದಡಿ, ಆತನನ್ನು ಬಂಧಿಸಲಾಗಿತ್ತು. ಈಗ ಈ ಕೇಸ್ನಲ್ಲಿ 10 ವರ್ಷ ಜೈಲು ಶಿಕ್ಷೆಯಾಗಿದೆ.
ಇದನ್ನೂ ಓದಿ: Mukhtar Ansari | ಯುಪಿ ಗ್ಯಾಂಗ್‌ಸ್ಟರ್- ರಾಜಕಾರಣಿ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?
ಮುಖ್ತಾರ್ ಅನ್ಸಾರಿ ವಿರುದ್ಧ ಹಲವು ಕ್ರಿಮಿನಲ್ ಕೇಸ್ಗಳಿದ್ದು, ಜೈಲರ್ ಒಬ್ಬರಿಗೆ ಪಿಸ್ತೂಲು ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಘಾಜಿಪುಟ್‌ನಲ್ಲಿ ಎಎಸ್‌ಪಿ ಮೇಲಿನ ದಾಳಿಯ ಕುರಿತು 1996ರಲ್ಲಿ ದಾಖಲಿಸಲಾದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳ ಸಂಬಂಧ ಕೂಡ ಇತ್ತೀಚೆಗಷ್ಟೇ 10ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧ, ಮುಖ್ತಾರ್ ಅನ್ಸಾರಿಯನ್ನು (Mukhtar Ansari) ಜಾರಿ ನಿರ್ದೇಶನಾಲಯ ಕೂಡ ಆತನನ್ನು ವಿಚಾರಣೆ ನಡೆಸುತ್ತಿದೆ. ಮುಖ್ತಾರ್ನ ಅಕ್ರಮ ಆಸ್ತಿ/ಮನೆಯನ್ನು ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಧ್ವಂಸ ಮಾಡಿದೆ.