Site icon Vistara News

Mulayam Singh Yadav: ಮುಲಾಯಂ ಸಿಂಗ್‌ ಮೂರ್ತಿ ತೆರವು; ಯೋಗಿ ನಾಡಲ್ಲಿ ರೂಲ್ಸ್‌ ಎಂದರೆ ರೂಲ್ಸ್!

Mulayam Singh Yadav Statue

Mulayam Singh's statue installed without permission In Uttar Pradesh removed

ಲಖನೌ: ಯೋಗಿ ಆದಿತ್ಯನಾಥ್‌ ಆಡಳಿತದ ಉತ್ತರ ಪ್ರದೇಶದಲ್ಲಿ (Uttar Pradesh) ಕಾನೂನು ಪಾಲನೆ ಹಾಗೂ ಕಾನೂನು ಸುವ್ಯವಸ್ಥೆಗೆ (Law And Order) ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ತೆರವು, ಅಪರಾಧಿಗಳನ್ನು ಮಟ್ಟಹಾಕುವುದು ಸೇರಿ ಹಲವು ದಿಸೆಯಲ್ಲಿ ಯೋಗಿ ಆದಿತ್ಯನಾಥ್‌ ಕ್ರಮ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಅನುಮತಿ ಇಲ್ಲದೆ ಮೂರ್ತಿ ಸ್ಥಾಪನೆ ಮಾಡಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಮೂರ್ತಿಯನ್ನು (Mulayam Singh Yadav) ತೆರವುಗೊಳಿಸಲಾಗಿದೆ.

ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಸಮಾಜವಾದಿ ಪಕ್ಷದ ಕಚೇರಿಯನ್ನು ನಿರ್ಮಿಸಲಾಗಿದೆ. ಆ ಕಚೇರಿಯ ಬಳಿ ಮುಲಾಯಂ ಸಿಂಗ್‌ ಯಾದವ್‌ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಆದರೆ, ಅನುಮತಿ ಇಲ್ಲದೆ ಆರು ಅಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಪರಿಷತ್‌ ಅಧಿಕಾರಿಗಳು ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಆದರೆ, ಮೂರ್ತಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಮಾಜವಾದಿ ಪಕ್ಷದ ಹರ್ದೋಯಿ ಜಿಲ್ಲಾ ಘಟಕವು ನಿರಾಕರಿಸಿದೆ.

ನೋಟಿಸ್‌ ನೀಡಿದರೂ ಡೋಂಟ್‌ ಕೇರ್

“ನಗರ ಪಾಲಿಕೆ ಪರಿಷತ್‌ನಿಂದ ಹರ್ದೋಯಿಯಲ್ಲಿ ಎಂಟು ಅಂಗಡಿಗಳನ್ನು ವ್ಯಾಪಾರಿಗಳಿಗೆ ನೀಡಲಾಗಿದೆ. ಇವುಗಳ ಬಳಿಯೇ ಸಮಾಜವಾದಿ ಪಕ್ಷದ ಕಚೇರಿ ನಿರ್ಮಿಸಲಾಗಿದೆ. ಆದರೆ, ಅನುಮತಿ ಇಲ್ಲದೆಯೇ ನಗರ ಪಾಲಿಕೆ ಪರಿಷತ್‌ ಕಚೇರಿ ಬಳಿಯೇ ಮುಲಾಯಂ ಸಿಂಗ್‌ ಯಾದವ್‌ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅನುಮತಿ ಇಲ್ಲದೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲಾಗಿದೆ” ಎಂದು ನಗರ ಪಾಲಿಕೆ ಪರಿಷತ್‌ ಇ.ಒ ವಿನೋದ್‌ ಕುಮಾರ್‌ ಸೋಲಂಕಿ ಮಾಹಿತಿ ನೀಡಿದ್ದಾರೆ.‌

ಇದನ್ನೂ ಓದಿ: Women’ Reservation bill : ಮಹಿಳಾ ಮೀಸಲಾತಿಗೆ ಸಿದ್ದರಾಮಯ್ಯ ಸ್ವಾಗತ, ಈಗ ಯೋಗಿ ಆದಿತ್ಯನಾಥ್‌ ಏನಂತಾರೆ?

“ಅನುಮತಿ ಇಲ್ಲದೆ ಪ್ರತಿಷ್ಠಾಪನೆ ಮಾಡಿರುವ ಮೂರ್ತಿಯನ್ನು ತೆರವುಗೊಳಿಸಬೇಕು ಎಂದು ಸೆಪ್ಟೆಂಬರ್‌ 23ರಂದು ನೋಟಿಸ್‌ ಜಾರಿಗೊಳಿಸಲಾಗಿತ್ತು. 24 ಗಂಟೆಯಲ್ಲಿ ಮೂರ್ತಿ ತೆರವುಗೊಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಗಡುವು ಮೀರಿದರೂ ಮೂರ್ತಿ ತೆರವು ಮಾಡದ ಕಾರಣ ಅಧಿಕಾರಿಗಳೇ ತೆರವು ಮಾಡಬೇಕಾಯಿತು” ಎಂದು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಕಚೇರಿ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಸಮಾಜವಾದಿ ಪಕ್ಷದ ಕಾರ್ಯಕರ್ತರು 10 ಲಕ್ಷ ರೂ. ಸಂಗ್ರಹಿಸಿದ್ದರು ಎಂದು ತಿಳಿದುಬಂದಿದೆ.

Exit mobile version