Site icon Vistara News

Ravi Kishan: ಗೋರಖ್‌ಪುರ ಬಿಜೆಪಿ ಸಂಸದ ರವಿ ಕಿಶನ್ ನನ್ನ ತಂದೆ ಎಂದು ಮೊಕದ್ದಮೆ ಹೂಡಿದ ನಟಿ

Ravi Kishan

ಮುಂಬೈ: ಬಿಜೆಪಿಯ ಗೋರಖ್‌ಪುರ ಸಂಸದ ರವಿ ಕಿಶನ್ (Ravi Kishan) ತನ್ನ ತಂದೆ ಎಂದು ಆರೋಪಿಸಿ 25 ವರ್ಷದ ನಟಿ ಶಿನೋವಾ ಶನಿವಾರ (ಏ.21) ಮುಂಬೈ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಹಾಗೆಯೇ, ಡಿಎನ್‌ಎ ಪರೀಕ್ಷೆ ನಡೆಸಬೇಕು ಕೋರಿದ್ದಾರೆ.

ಮೊಕದ್ದಮೆಯಲ್ಲಿ ಶಿನೋವಾ ಅವರು ಅಪರ್ಣಾ ಸೋನಿ ಜತೆ ರವಿ ಕಿಶನ್ ಅವರಿಗೆ ಸಂಬಂಧ ಇತ್ತು. ಆ ಸಂಬಂಧದಿಂದ ಜನಿಸಿದ ಮಗಳು ನಾನು ಎಂದು ಹೇಳಿಕೊಂಡಿದ್ದಾರೆ. ಕಿಶನ್ ತನ್ನ ತಂದೆ ಎಂದು ಬಹಿರಂಗಗೊಳಿಸಿದ ನಂತರ ಉತ್ತರ ಪ್ರದೇಶದಲ್ಲಿ ಸೋನಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಮೂರು ದಿನಗಳ ಹಿಂದೆ ಕಿಶನ್ ಅವರ ಪತ್ನಿ ಪ್ರೀತಿ ಶುಕ್ಲಾ ಅವರು ಶಿನೋವಾ ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ರವಿ ಕಿಶನ್‌ ಅವರು ತನ್ನ ತಂದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರೀತಿ ಶುಕ್ಲಾ ಅವರು ಎಫ್‌ಐಆರ್‌ ದಾಖಲಿಸಿದ್ದರು. ರವಿ ಕಿಶನ್ ಅವರು ತನ್ನ ಮಗಳಿಗೆ ಅಪ್ಪ ಎಂದು ಹೇಳಿಕೊಂಡಿರುವ ಮಹಿಳೆ ಅಪರ್ಣಾ ಠಾಕೂರ್ ಮಾತ್ರವಲ್ಲದೆ, ಆಕೆಯ ಪತಿ ರಾಜೇಶ್ ಸೋನಿ, ಮಗಳು ಶೆನೋವಾ ಸೋನಿ, ಮಗ ಸೋನಕ್ ಸೋನಿ ಹಾಗೂ ಸಮಾಜವಾದಿ ಪಕ್ಷದ ನಾಯಕ ವಿವೇಕ್ ಕುಮಾರ್ ಪಾಂಡೆ ಮತ್ತು ಪತ್ರಕರ್ತ ಖುರ್ಷಿದ್ ಖಾನ್ ಅವರನ್ನು ಕೂಡ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು.

ಇದನ್ನೂ ಓದಿ: Jerusha Christopher: ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ʻವೀರ ಮದಕರಿʼ ಬಾಲನಟಿ ನಾಯಕಿ!

ತನಗೆ ಭೂಗತ ಲೋಕದ ಜತೆ ನಂಟು ಇದೆ ಎಂದು ಅಪರ್ಣಾ ಠಾಕೂರ್ ಬೆದರಿಕೆ ಹಾಕಿರುವುದಾಗಿ ಬಿಜೆಪಿ ಸಂಸದ ರವಿ ಕಿಶನ್ ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದರು. 20 ಕೋಟಿ ರೂ ಹಣ ನೀಡಬೇಕು. ತನ್ನ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ರವಿ ಕಿಶನ್ ಅವರ ಹೆಸರು ಕೆಡಿಸುವುದಾಗಿ ಆಕೆ ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಸಿದ್ದರು.

Exit mobile version