ಮುಂಬೈ: ಮಹಾರಾಷ್ಟ್ರದಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಹೊರಹಾಕಿದರೆ ರಾಜ್ಯಕ್ಕೆ ತೀವ್ರ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಹಣವೇ ಇರುವುದಿಲ್ಲ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದ್ದಾರೆ. ಇದು ಶಿವಸೇನೆಯಲ್ಲಿ, ಅದರಲ್ಲೂ ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಕೋಪ ತರಿಸಿದೆ. ಮುಂಬೈನ ಅಂಧೇರಿಯಲ್ಲಿ ಮಾತನಾಡಿದ ರಾಜ್ಯಪಾಲರು ಈ ಮಾತುಗಳನ್ನಾಡಿದ್ದಾರೆ. ʼಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬೈ ಮತ್ತು ಥಾಣೆಯಲ್ಲಿ ಇರುವ ಗುಜರಾತಿಗಳು ಮತ್ತು ರಾಜಸ್ಥಾನಿಗಳಿಂದಲೇ ಮುಂಬೈ ವಾಣಿಜ್ಯ ನಗರಿ, ಭಾರತದ ಆರ್ಥಿಕ ರಾಜಧಾನಿ ಎಂಬ ಪಟ್ಟ ಪಡೆದಿದೆ. ಆದರೆ ನೀವು ಅವರನ್ನೇ ಇಲ್ಲಿಂದ ಓಡಿಸಿಬಿಟ್ಟರೆ, ಮುಂಬೈ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲʼ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ರಾಜ್ಯಪಾಲರ ಈ ಹೇಳಿಕೆಗೆ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸ್ವಲ್ಪ ನೋಡಿಕೊಂಡು ಮಾತನಾಡಿ ಎಂದು ಎನ್‌ಸಿಪಿ ಹೇಳಿದ್ದರೆ, ಶಿವಸೇನೆ ಸಂಸದ ಸಂಜಯ್ ರಾವತ್ ತುಸು ಕಟುವಾಗಿಯೇ ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ʼಗುಜರಾತಿ-ರಾಜಸ್ಥಾನಿಗಳಿಂದಲೇ ರಾಜ್ಯ ನಡೆಯುತ್ತಿದೆ ಎಂಬರ್ಥದ ಮಾತುಗಳನ್ನು ರಾಜ್ಯಪಾಲರು ಹೇಳಿದ್ದಾರೆ. ಈ ಮೂಲಕ ಶ್ರಮಜೀವಿಗಳಾದ ಮರಾಠಿಗರಿಗೆ ಅವಮಾನ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಏರುತ್ತಿದ್ದಂತೆ, ಮರಾಠಿಗರು ಅಪಮಾನಕ್ಕೆ ಒಳಗಾಗುತ್ತಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಸಿದ್ದಾರೆ.
ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಕೂಡ ಟ್ವೀಟ್ ಮಾಡಿ, ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆ ಖಂಡಿಸಿದ್ದಾರೆ. ‘ತಾವೊಬ್ಬ ರಾಜ್ಯಪಾಲರಾಗಿ ಏನು ಮಾತನಾಡಬೇಕು. ಏನು ಮಾಡಬೇಕು ಎಂಬ ಅರಿವು ಅವರಿಗೆ ಇಲ್ಲ. ಕುರ್ಚಿಯಲ್ಲಿ ಕುಳಿತು, ಇನ್ನೊಬ್ಬರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತಾನು ಯಾವ ರಾಜ್ಯದ ರಾಜ್ಯಪಾಲರು ಎಂಬುದನ್ನು ಕೋಶ್ಯಾರಿ ಮರೆಯಬಾರದು. ಇಲ್ಲೇ ಇದ್ದುಕೊಂಡು ಅವರು ಇಲ್ಲಿನ ಜನರನ್ನೇ ದೂಷಿಸುತ್ತಿದ್ದಾರೆ. ಕೋಶ್ಯಾರಿ ಆಳ್ವಿಕೆಯಲ್ಲಿ ಮಹಾರಾಷ್ಟ್ರದ ರಾಜಕೀಯ ಸಂಪ್ರದಾಯ ಮತ್ತು ರಾಜ್ಯಪಾಲ ಹುದ್ದೆಯ ಗೌರವ ಕಳೆದು ಹೋಗಿದೆ. ಅದರ ಜತೆಗೆ ಮಹಾರಾಷ್ಟ್ರದ ಘನತೆಯನ್ನೂ ಅವರು ಕುಗ್ಗಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಆರೋಪಿಸಿದ್ದಾರೆ.
ಇಡೀ ಮಹಾರಾಷ್ಟ್ರದ ಆರ್ಥಿಕತೆ ಇಲ್ಲಿರುವ ರಾಜಸ್ಥಾನಿಗಳು ಮತ್ತು ಗುಜರಾತಿಗಳ ಮೇಲೆ ಅವಲಂಬಿಸಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿದ್ದು ಸಹಜವಾಗಿಯೇ ಅಲ್ಲಿನವರಲ್ಲಿ ಆಕ್ರೋಶ ಹುಟ್ಟಿಸಿದೆ. ಇದೇ ವಿಚಾರ ಚರ್ಚಿಸಲು ಇಂದು ಮಧ್ಯಾಹ್ನ ಉದ್ಧವ್ ಠಾಕ್ರೆ ತಮ್ಮ ಬಣದ ಸಂಸದರು/ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ, “ಮಹಾರಾಷ್ಟ್ರವನ್ನು ದೇಶದ ಮುಂಚೂಣಿ ರಾಜ್ಯವನ್ನಾಗಿ ಮಾಡಲು ಇಲ್ಲಿನ ಮರಾಠಿಗರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಈ ರಾಜ್ಯಪಾಲರು ಮರಾಠಿಗರ ಪರಿಶ್ರಮವನ್ನೇ ಅಮಾನಿಸಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ”
ಇದನ್ನೂ ಓದಿ: ಮಾತು ತಪ್ಪದ ಸಿಎಂ ಶಿಂಧೆ; ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿತ