Site icon Vistara News

ವಿದ್ಯಾರ್ಥಿನಿಯನ್ನು ವೇದಿಕೆಗೆ ಕರೆದಿದ್ದಕ್ಕೆ ಛೀಮಾರಿ ಹಾಕಿದ ಮುಸ್ಲಿಂ ವಿದ್ವಾಂಸನ ವಿರುದ್ಧ ಕೇರಳ ರಾಜ್ಯಪಾಲ ಗರಂ

Kerala Governor

Kerala Governor

ತಿರುವನಂತಪುರಂ: ಮುಸ್ಲಿಂ ಬಾಲಕಿಯೊಬ್ಬಳನ್ನು ವೇದಿಕೆಗೆ ಕರೆದು ಪ್ರಶಸ್ತಿ ಪ್ರದಾನ ಮಾಡಿದ್ದಕ್ಕೆ ಕಾರ್ಯಕ್ರಮ ಆಯೋಜಕರಿಗೆ ಛೀಮಾರಿ ಹಾಕಿದ್ದ ಮುಸ್ಲಿಂ ವಿದ್ವಾಂಸನನ್ನು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಟೀಕಿಸಿದ್ದಾರೆ. ಆ ಬಾಲಕಿ ಪ್ರತಿಭಾವಂತೆ. ಆದರೆ ಮುಸ್ಲಿಂ ಧರ್ಮದಲ್ಲಿ ಹುಟ್ಟಿದ್ದಾಳೆ ಎಂಬ ಒಂದೇ ಕಾರಣಕ್ಕೆ ಆಕೆ ಇಂಥ ಅವಮಾನ ಅನುಭವಿಸಬೇಕಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆರಿಫ್‌ ಮೊಹಮ್ಮದ್‌ ಸ್ವತಃ ಮುಸ್ಲಿಂ ಮುಖಂಡರಾಗಿದ್ದರೂ, ತಮ್ಮದೇ ಸಮುದಾಯದ ಹಲವು ನೀತಿ-ಪದ್ಧತಿಗಳನ್ನು ಕಟುವಾಗಿ ವಿಮರ್ಶೆ ಮಾಡುತ್ತಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಹಿಜಾಬ್‌ ವಿವಾದ ಎದ್ದಿದ್ದಾಗ, ಮುಸ್ಲಿಂ ಸಮುದಾಯದ ಬಹುತೇಕ ಮುಖಂಡರು ಹಿಜಾಬ್‌ ಪರವಾಗಿಯೇ ಧ್ವನಿ ಎತ್ತಿದ್ದರು. ಆದರೆ ಆರಿಫ್‌ ಮೊಹಮ್ಮದ್‌, ಇಸ್ಲಾಂನಲ್ಲಿ ಹಿಜಾಬ್‌ ಕಡ್ಡಾಯ ಎಂದು ಎಲ್ಲಿಯೂ ಹೇಳಿಲ್ಲ. ವಿದ್ಯಾರ್ಥಿಗಳು ಇಂಥದ್ದಕ್ಕೆಲ್ಲ ಹೋರಾಟ ಮಾಡಿ, ಶಿಕ್ಷಣ ವಂಚಿತರಾಗಬಾರದು ಎಂದು ಬುದ್ಧಿವಾದ ಹೇಳಿದ್ದರು.

ಇದನ್ನೂ ಓದಿ | Naxal Karnataka: ಇಬ್ಬರು ಕುಖ್ಯಾತ ನಕ್ಸಲರನ್ನು ಕುಂದಾಪುರ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್

ಈಗಾಗಿದ್ದೇನು?

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಮದರಸಾ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪಡೆದ ಬಾಲಕರನ್ನು ವೇದಿಕೆಯ ಮಧ್ಯಭಾಗಕ್ಕೆ ಕರೆದು ಎಲ್ಲರೂ ಸೇರಿ ಪ್ರಶಸ್ತಿ ನೀಡಿದರು. ಇದೇ ವೇಳೆ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ವೇದಿಕೆಗೆ ಕರೆದು ಪ್ರಶಸ್ತಿ ನೀಡಲಾಯಿತು. ಬಾಲಕಿಗೆ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ನಾಯಕರಾದ ಪಾಣಕ್ಕಾಡ್ ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್ ಅವರೇ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ, ಅಭಿನಂದಿಸಿದ್ದಾರೆ. ಬಾಲಕಿಯ ಹೆಸರು ಕೂಗುತ್ತಿದ್ದಂತೆ ವೇದಿಕೆಯಲ್ಲಿದ್ದವರೆಲ್ಲ ಹಿಂದೆ ಸರಿದರು. ಪ್ರಶಸ್ತಿ ನೀಡಬೇಕಾದವರು ವೇದಿಕೆಯ ಒಂದು ಬದಿಗೆ ಬಂದು, ಒಂದು ಮೂಲೆಯಲ್ಲಿ ಪ್ರಶಸ್ತಿ ನೀಡಿ ಬಾಲಕಿಯನ್ನು ಕಳಿಸಿಕೊಟ್ಟರು.

ವೇದಿಕೆಯಲ್ಲಿದ್ದಾಗಲೇ ಇದಕ್ಕೆ ಸಮಸ್ತ ಕೇರಳ ಜೆಮ್‌ ಇಯ್ಯತುಲ್‌ ಉಲಮಾ ಸಂಸ್ಥೆಯ (ಮುಸ್ಲಿಂ ವಿದ್ವಾಂಸರ ಸಂಸ್ಥೆ) ಹಿರಿಯ ಕಾರ್ಯಕಾರಿ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್‌ ಗಲಾಟೆ ಮಾಡಿದರು. ‘ಆ ಹುಡುಗಿಯನ್ನು ಯಾಕೆ ವೇದಿಕೆಗೆ ಕರೆಯಬೇಕಿತ್ತು? ಪಾಲಕರನ್ನು ಕರೆದು ಪ್ರಶಸ್ತಿ ಕೊಟ್ಟಿದ್ದರೆ ಸಾಕಿತ್ತು. ಇನ್ನೊಮ್ಮೆ ಇಂಥ ಪ್ರಶಸ್ತಿ ವಿತರಣೆ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡರೆ ಹುಡುಗಿಯರನ್ನು ವೇದಿಕೆಗೆ ಕರೆಯಬೇಡಿ. ನಿಮಗೆ ಸಮಸ್ತ ಸಂಸ್ಥೆಯ ನೀತಿ-ನಿಯಮಗಳು ಗೊತ್ತಿಲ್ಲವೇ? ಈಗ ನೋಡಿ, ಆ ಹುಡುಗಿ ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಿದ ವಿಡಿಯೋ, ಫೋಟೋಗಳೆಲ್ಲ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತವೆ..’ ಎಂದು ಮುಸಲಿಯಾರ್‌, ಕಾರ್ಯಕ್ರಮ ಆಯೋಜಕರ ಎದುರು ಕೂಗಾಡಿರುವ ವಿಡಿಯೋ ವೈರಲ್‌ ಆಗಿತ್ತು.

ಕೇರಳ ರಾಜ್ಯಪಾಲರ ಅಸಮಾಧಾನ

ಮುಸ್ಲಿಂ ವಿದ್ವಾಂಸ ಎಂ.ಟಿ. ಅಬ್ದುಲ್ಲಾರ ಈ ವಿಡಿಯೋ ನೋಡಿ ಕೇರಳ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ವಿದ್ವಾಂಸರು ಈ ಸಮುದಾಯದ ಮಹಿಳೆಯರ ಹಕ್ಕುಗಳನ್ನು ಹೇಗೆ ಕಿತ್ತುಕೊಳ್ಳುತ್ತಾರೆ ಮತ್ತು ಕುರಾನ್‌ನಲ್ಲಿರುವ ಅಂಶಗಳನ್ನು, ಸಂವಿಧಾನದ ನಿಬಂಧನೆಗಳನ್ನು ಧಿಕ್ಕರಿಸಿ, ಮಹಿಳೆಯರ ವ್ಯಕ್ತಿತ್ವವವನ್ನು ನಿಯಂತ್ರಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಹೇಳಿದ್ದಾರೆ . ಇನ್ನೊಂದೆಡೆ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಪಿ. ಸತಿದೇವಿ ಕೂಡ ಮುಸ್ಲಿಂ ವಿಧ್ವಾಂಸನ ನಡೆಯನ್ನು ವಿರೋಧಿಸಿದ್ದಾರೆ. ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಹುಡುಗಿಗೆ ಆದ ಅವಮಾನ ಇದು ಎಂದು ಹೇಳಿದ್ದಾರೆ.

ಇದನ್ನೂ ಓದಿ | ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗೆ ಬೊಜ್ಜು

Exit mobile version