Site icon Vistara News

MV Ganga Vilas | ವಿಶ್ವದ ಅತಿ ಉದ್ದದ ರಿವರ್‌ ಕ್ರೂಸ್‌ನಲ್ಲಿ ಹೋಗಬೇಕಾ? ಮುಂದಿನ ವರ್ಷದ ಮಾರ್ಚ್‌ವರೆಗೂ ಕಾಯಬೇಕು!

ವಾರಾಣಸಿ: ವಿಶ್ವದ ಅತಿ ಉದ್ದದ ಐಷಾರಾಮಿ ರಿವರ್‌ ಕ್ರೂಸ್‌ ಆದ ʻಎಂವಿ ಗಂಗಾ ವಿಲಾಸʼ (MV Ganga Vilas) ಹಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದಾರೆ. ಈ ಕ್ರೂಸ್‌ ಪ್ರಯಾಣಕ್ಕೆ ಈಗಾಗಲೇ ಭಾರಿ ಬೇಡಿಕೆ ಬಂದಿದ್ದು, ಮುಂದಿನ ವರ್ಷದ ಮಾರ್ಚ್‌ವರೆಗಿನ ಎಲ್ಲ ಬುಕಿಂಗ್ ಸಂಪೂರ್ಣವಾಗಿದೆ ಎಂದು ಅದರ ನಿರ್ವಾಹಕರು ತಿಳಿಸಿದ್ದಾರೆ.

ಇದನ್ನೂ ಓದಿ: PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್‌ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ

“ಮಾರ್ಚ್‌ 2024ರವರೆಗೆ ಬುಕ್ಕಿಂಗ್‌ ಸಂಪೂರ್ಣವಾಗಿದೆ. ಇನ್ನು ಬುಕ್ಕಿಂಗ್‌ ಮಾಡಿಕೊಳ್ಳಬಯಸುವವರು 2024ರ ಏಪ್ರಿಲ್‌ನಿಂದ ಆರಂಭವಾಗುವ ಪ್ರವಾಸಕ್ಕೆ ಮಾಡಿಕೊಳ್ಳಬಹುದು” ಎಂದಿದ್ದಾರೆ ಗಂಗಾ ವಿಲಾಸ ಕ್ರೂಸ್‌ನ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅಂತರಾ ಐಷಾರಾಮಿ ಕ್ರೂಸ್‌ಗಳ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಸುಧಾಮಿನಿ ಮಥುರ್.‌

ಈ ಕ್ರೂಸ್‌ ಒಟ್ಟು 51 ದಿನಗಳ ಕಾಲ ಭಾರತ ಮತ್ತು ಬಾಂಗ್ಲಾದೇಶದ ಐದು ರಾಜ್ಯಗಳಲ್ಲಿ ಪ್ರಯಾಣ ಮಾಡುತ್ತದೆ. 36 ಪ್ರಯಾಣಿಕರು ಪ್ರಯಾಣಿಸುವ ಸೌಲಭ್ಯಗಳಿದ್ದು, ಒಬ್ಬರಿಗೆ ತಲಾ 20 ಲಕ್ಷ ರೂ. ಶುಲ್ಕ ಬೀಳಲಿದೆ. ಈ ಕ್ರೂಸ್‌ನಲ್ಲಿ ಪ್ರಯಾಣಿಸುವವರಿಗೆ ಸಂಪೂರ್ಣ ಸಸ್ಯಾಹಾರಿ ಆಹಾರ ನೀಡಲಾಗುವುದು. ಮದ್ಯಪಾನ ಮುಕ್ತ ಕ್ರೂಸ್‌ ಇದಾಗಿದೆ.
ವಾರಾಣಸಿಯಿಂದ ಪ್ರಯಾಣ ಆರಂಭಿಸುವ ಕ್ರೂಸ್, ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್‌, ಪಶ್ಚಿಮ ಬಂಗಾಳದ ಕೋಲ್ಕೊತಾ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಲಿದೆ. ಪ್ರವಾಸಿಗರು ಅಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: Voice of Global South Summit | ಜಗತ್ತಿಗೇ ಔಷಧ ನೆರವು ನೀಡಲು ʼಆರೋಗ್ಯ ಮೈತ್ರಿʼ ಯೋಜನೆ ಘೋಷಿಸಿದ ಮೋದಿ
ಈಗಾಗಲೇ ಬುಕ್ಕಿಂಗ್‌ ಮಾಡಿರುವವರಲ್ಲಿ ಅಮೆರಿಕ ಮತ್ತು ಯರೋಪ್‌ನ ನಾಗರಿಕರೇ ಹೆಚ್ಚಿದ್ದಾರೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ಪ್ರಯಾಣ ಬೆಳೆಸಿದ್ದಾರೆ. ಅವರನ್ನು ವಾರಾಣಸಿಯ ಬಂದರಿನಲ್ಲಿ ಹೂಮಾಲೆ ಹಾಕಿ, ಶಹನಾಯಿ ನಾದದೊಂದಿಗೆ ಬೀಳ್ಕೊಡಲಾಯಿತು.

ಈ ಐಷಾರಾಮಿ ಕ್ರೂಸ್‌ 18 ಸೂಟ್‌ಗಳ ಸಾಮರ್ಥ್ಯವನ್ನು ಹೊಂದಿದೆ. 62 ಮೀಟರ್‌ ಉದ್ದ, 12 ಮೀಟರ್‌ ಅಗಲವಿದೆ. ಇದರಲ್ಲಿ ಒಟ್ಟು 39 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 35 ವರ್ಷಗಳ ಅನುಭವ ಇರುವ ಮಹದೇವ್‌ ನಾಯಕ್‌ ಅವರು ಈ ಕ್ರೂಸ್‌ನ ಕ್ಯಾಪ್ಟನ್‌ ಆಗಿದ್ದಾರೆ.

ಇದನ್ನೂ ಓದಿ | PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್‌ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ

Exit mobile version