ಪಂಜಾಬ್ನ ಫಿಲ್ಲೌರಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ನಡೆಯುತ್ತಿದ್ದಾಗಲೇ ಕುಸಿದುಬಿದ್ದು ಮೃತಪಟ್ಟ ಜಲಂಧರ್ ಕ್ಷೇತ್ರದ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಪುತ್ರ ವಿಕ್ರಮಜಿತ್ ಚೌಧರಿ ಇದೀಗ ಯಾತ್ರೆಯಲ್ಲಿ ವೈದ್ಯರ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನನ್ನ ಅಪ್ಪ ಅಸ್ವಸ್ಥರಾಗಿ ಬಿದ್ದಾಗ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ.
ಸಂತೋಖ್ ಸಿಂಗ್ ಅವರು ಜನವರಿ 14ರಂದು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿಯವರ ಪಕ್ಕದಲ್ಲಿಯೇ ನಡೆಯುತ್ತಿದ್ದರು. ಆದರೆ ಒಮ್ಮೆಲೇ ಅತ್ಯಂತ ಸುಸ್ತಾಗಿ ಕುಸಿದುಬಿದ್ದರು. ಅವರನ್ನು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ಫಾಗ್ವಾರ್ನ ವಿರ್ಕ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲೇ ಅವರ ಜೀವ ಹೋಗಿತ್ತು. ಕೂಡಲೇ ಭಾರತ್ ಜೋಡೋ ಯಾತ್ರೆಯನ್ನು ಸ್ಥಗಿತಗೊಳಿಸಿ, ರಾಹುಲ್ ಗಾಂಧಿ ಕೂಡ ಆಸ್ಪತ್ರೆಗೆ ತೆರಳಿದ್ದರು.
ತಂದೆಯ ಸಾವಿನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಅವರ ಪುತ್ರ, ಫಿಲ್ಲೌರಿ ಕಾಂಗ್ರೆಸ್ ಶಾಸಕ ವಿಕ್ರಮಜಿತ್ ಚೌಧರಿ ‘ನನ್ನ ತಂದೆ ಆ್ಯಂಬುಲೆನ್ಸ್ನಲ್ಲಿ ಇದ್ದಾಗ, ಅವರ ಎದೆಭಾಗದಲ್ಲಿ ಒತ್ತಿದಾಗ ಉಸಿರಾಡುತ್ತಿದ್ದರು. ಆದರೆ ವೈದ್ಯರು ನಮ್ಮನ್ನೆಲ್ಲ ಬದಿಗೆ ಕುಳಿತುಕೊಳ್ಳುವಂತೆ ಹೇಳಿದರು. ವೈದ್ಯರೇ ಭಯಬಿದ್ದರು, ಹೊರತು ಸೂಕ್ತ ಚಿಕಿತ್ಸೆ ಕೊಡಲಿಲ್ಲ. ಇಷ್ಟು ವರ್ಷದ ಜೀವನದಲ್ಲಿ ನನ್ನ ತಂದೆಯವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಆಗಿದ್ದು ಬಿಟ್ಟರೆ, ಉಳಿದಂತೆ ಇನ್ನೇನೂ ತೊಂದರೆ ಇರಲಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಅವರನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾದಯಾತ್ರೆ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಕಾಂಗ್ರೆಸ್ ಸಂಸದ; ಭಾರತ್ ಜೋಡೋ ಯಾತ್ರೆ ಸ್ಥಗಿತ