ನವ ದೆಹಲಿ: 1963ರಲ್ಲಿ ನಾಗಾಲ್ಯಾಂಡ್ ಉದಯವಾದ ಬಳಿಕ ಇಷ್ಟು ವರ್ಷದಲ್ಲಿ ಒಂದು ಸಲವೂ ಚುನಾವಣೆಯಲ್ಲಿ (Nagaland Election) ಒಬ್ಬರೇ ಒಬ್ಬ ಮಹಿಳೆ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಮಹಿಳೆಯರು ಚುನಾಯಿತರಾಗಿದ್ದಾರೆ. ಇಲ್ಲಿನ ಪಶ್ಚಿಮ ಅಂಗಾಮಿ ಎಸಿ ಕ್ಷೇತ್ರದಿಂದ ಸಾಲ್ಹೋತೌನೋ ಖ್ರುಸೆ ಮತ್ತು ದಿಮಾಪುರ್-111 ವಿಧಾನಸಭಾ ಕ್ಷೇತ್ರದಿಂದ ಹೆಕಾನಿ ಜಖಾಲು ಗೆದ್ದಿದ್ದಾರೆ. ಈ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಇವರಿಬ್ಬರೂ ಎನ್ಡಿಪಿಪಿ (ನ್ಯಾಷನಲ್ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ)ಯವರೇ ಆಗಿದ್ದಾರೆ.
ಸಾಲ್ಹೋತೌನೋ ಖ್ರುಸೆ ಅವರು ಸ್ಥಳೀಯ ಹೋಟೆಲ್ವೊಂದರ ಮಾಲೀಕರು. ಇವರ ಪರ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೊ ಅವರಷ್ಟೇ ಅಲ್ಲದೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಕೂಡ ಆಗಮಿಸಿ ಪ್ರಚಾರ ನಡೆಸಿದ್ದರು. ಇನ್ನು ಹೆಕಾನಿ ಜಖಾಲು ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿಧರರು. ಅಲ್ಲೇ ಪ್ರಾಧ್ಯಾಪಕರೂ ಆಗಿದ್ದರು. ಇವರ ಪರವಾಗಿಯೂ ಪ್ರಚಾರ ನಡೆಸಲಾಗಿತ್ತು.
ಇದನ್ನೂ ಓದಿ: North East Election Results: ತ್ರಿಪುರಾ, ಮೇಘಾಲಯದಲ್ಲಿ ಹಂಗ್? ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎಗೆ ಮುನ್ನಡೆ
ನಾಗಾಲ್ಯಾಂಡ್‌ನಲ್ಲಿ ಫೆ.27ರಂದು ವಿಧಾನಸಭೆ ಚುನಾವಣೆ ನಡೆದಿತ್ತು. ಅದರ ಮತ ಎಣಿಕೆ ಇಂದು ಮುಂಜಾನೆಯಿಂದ ನಡೆಯುತ್ತಿದೆ. ಇಲ್ಲಿ ಎನ್ಡಿಪಿಪಿ-ಬಿಜೆಪಿ ಮೈತ್ರಿ 34 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ಅಗತ್ಯ ಇರುವ ಮ್ಯಾಜಿಕ್ ನಂಬರ್ 31ನ್ನು ದಾಟಿದೆ.