ಹೈದರಾಬಾದ್: ಮಾಜಿ ಮುಖ್ಯಮಂತ್ರಿ, ತೆಲುಗಿನ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಮೊಮ್ಮಗ, ಜೂನಿಯರ್ ಎನ್‌ಟಿಆರ್ ಅಣ್ಣ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದು, ಇಡೀ ತೆಲುಗು ಚಿತ್ರರಂಗವೇ ಕಂಬನಿ ಮಿಡಿದೆ. ಭಾನುವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ ನಂದಮೂರಿ ತಾರಕರತ್ನ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ಸಾಗಿಸಲಾಗುತ್ತಿದೆ. ಹಾಗೆಯೇ, ಭಾನುವಾರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿ, ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ನಂದಮೂರಿ ತಾರಕರತ್ನ ಅವರು ತೆಲುಗು ಚಿತ್ರರಂಗದ ೨೨ ಸಿನಿಮಾಗಳಲ್ಲಿ ನಟಿಸಿದರೂ, ಅವರು ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಸೆಳೆದಿದ್ದರು. ಅಲ್ಲದೆ, ಅಜ್ಜನಂತೆ ನಂದಮೂರಿ ತಾರಕರತ್ನ ಅವರೂ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಟಿಡಿಪಿ ಪರ ಅವರು ಪ್ರಚಾರ ಮಾಡುವ ವೇಳೆಯೇ ಅವರಿಗೆ ಹೃದಯಾಘಾತವುಂಟಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ದುರಂತವೇ ಸರಿ.
೧೯೮೩ರ ಫೆಬ್ರವರಿ ೨೨ರಂದು ಆಂಧ್ರಪ್ರದೇಶದ ನಿಮ್ಮಕೂರು ಗ್ರಾಮದಲ್ಲಿ ಜನಿಸಿದ ನಂದಮೂರಿ ತಾರಕರತ್ನ ಅವರ ತಂದೆ ಹೆಸರು ನಂದಮೂರಿ ಮೋಹನ ಕೃಷ್ಣ ಹಾಗೂ ತಾಯಿ ನಂದಮೂರಿ ಶಾಂತಿ ಮೋಹನ್.
ಮೊದಲ ಸಿನಿಮಾವೇ ಭರ್ಜರಿ ಹಿಟ್
ನಂದಮೂರಿ ತಾರಕರತ್ನ ಅವರ ಮೊದಲ ಸಿನಿಮಾವೇ ಭರ್ಜರಿ ಹಿಟ್ ಆಯಿತು. ಒಕಟೋ ನಂಬರ್ ಕುರ‍್ರಾಡು ಮೂಲಕ ತೆಲುಗು ರಂಗಕ್ಕೆ ೨೦೦೨ರಲ್ಲಿ ಎಂಟ್ರಿ ಕೊಟ್ಟ ಅವರು ವಿಭಿನ್ನ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದರು. ಭದ್ರಾದಿ ರಾಮುಡು, ಅಮರಾವತಿ, ಯುವರತ್ನ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ೨೦೦೯ರಲ್ಲಿ ಅಮರಾವತಿ ಸಿನಿಮಾದ ಖಳನಾಯಕನ ಪಾತ್ರಕ್ಕೆ ಅವರಿಗೆ ನಂದಿ ಪ್ರಶಸ್ತಿ ದೊರೆತಿದೆ.
ರಾಜಕೀಯ, ಕಾರ್ ನಂಬರ್ ಕ್ರೇಜ್
ಆಲಕೇಯ ಅವರನ್ನು ೨೦೦೨ರಲ್ಲಿ ವರಿಸಿದ ನಂದಮೂರಿ ತಾರಕರತ್ನ ಅವರಿಗೆ ನಿಷ್ಕಾ ಎಂಬ ಮಗಳಿದ್ದಾಳೆ. ಇವರಿಗೆ ಸಿನಿಮಾ ಜತೆಗೆ ರಾಜಕೀಯ, ಕ್ರಿಕೆಟ್, ಕಾರ್ ನಂಬರ್ ಕ್ರೇಜ್ ಹೆಚ್ಚಿತ್ತು. ಟಿಡಿಪಿಯಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ತಾರಕರತ್ನ ಅವರು ೨೦೧೬ರಲ್ಲಿ ೧.೫ ಕೋಟಿ ರೂ. ಬೆಲೆ ದುಬಾರಿ ಕಾರು ಖರೀದಿಸಿದ್ದರು. ಅಷ್ಟೇ ಅಲ್ಲ, ಆ ಕಾರ್ ನಂಬರ್ ೯೯೯೯ ಇರಬೇಕು ಎಂದು ಆರ್‌ಟಿಒಗೆ ಹೆಚ್ಚುವರಿಯಾಗಿ ೬ ಲಕ್ಷ ರೂ. ಕೊಟ್ಟು ಫ್ಯಾನ್ಸಿ ನಂಬರ್‌ಅನ್ನು ತಮ್ಮದಾಗಿಸಿಕೊಂಡಿದ್ದರು.
ಇದನ್ನೂ ಓದಿ: Nandamuri Taraka Ratna: ತೆಲುಗಿನ ಖ್ಯಾತ ನಟ ನಂದಮೂರಿ ತಾರಕರತ್ನ ಇನ್ನಿಲ್ಲ