Site icon Vistara News

ಎಲ್ಲರೂ ಒಟ್ಟಾಗಿ ಕುಳಿತು ದೂರದರ್ಶನದಲ್ಲಿ ಸ್ವರಾಜ್ ವಿಶೇಷ ಸರಣಿ ವೀಕ್ಷಿಸಿದ ಪ್ರಧಾನಿ ಮೋದಿ, ಕೇಂದ್ರ ಸಚಿವರು

Swaraj', new show on Doordarshan

ನವ ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ಕೆಚ್ಚೆದೆಯಿಂದ ಹೋರಾಟ ಮಾಡಿದ ವೀರರ ಕುರಿತಾದ ಟಿವಿ ಶೋ ‘ಸ್ವರಾಜ್​: ಭಾರತ್ ಕೆ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ (Swaraj: Bharat Ke Swatantrata Sangram Ki Samagra Gatha) ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್​ ಶಾ, ನಿತಿನ್​ ಗಡ್ಕರಿ, ಪ್ರಲ್ಹಾದ್​ ಜೋಶಿ, ಪಿಯುಷ್​ ಗೋಯೆಲ್​, ಅನುರಾಗ್ ಠಾಕೂರ್, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ​ ಮತ್ತು ಇನ್ನಿತರ ಹಲವು ರಾಜಕೀಯ ಪ್ರಮುಖರೆಲ್ಲ ಒಟ್ಟಾಗಿ ವೀಕ್ಷಿಸಿದರು.

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ವಿಶೇಷವಾಗಿ, ಸಂಸತ್ತಿನ ಲೈಬ್ರರಿ ಕಟ್ಟಡದಲ್ಲಿರುವ ಜಿಎಂಸಿ ಅಡಿಟೋರಿಯಂನಲ್ಲಿ ದೂರದರ್ಶನ ಇದನ್ನು ಪ್ರಸ್ತುತಿ ಪಡಿಸಿತ್ತು. ಗಣ್ಯರೆಲ್ಲ ಸೇರಿ ಈ ‘ಸ್ವರಾಜ್​: ಭಾರತ್ ಕೇ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ ವೀಕ್ಷಣೆ ಮಾಡಿದ್ದರ ಫೋಟೋವನ್ನು ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿರುವ ಪ್ರಸಾರ ಭಾರತಿ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. ಹಾಗೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೂ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಏನಿದು ‘ಸ್ವರಾಜ್​: ಭಾರತ್ ಕೇ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ?’
ಸ್ವರಾಜ್​: ಭಾರತ್ ಕೇ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ 75 ಎಪಿಸೋಡ್​​ಗಳಿರುವ ಒಂದು ಸರಣಿ ಶೋ. ಭಾರತದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಬಗ್ಗೆ ತುಂಬ ಜನರಿಗೆ ಗೊತ್ತಿಲ್ಲದ ಸಂಗತಿಯನ್ನು ಇದರಲ್ಲಿ ತೋರಿಸಲಾಗಿದೆ. ಅದರಲ್ಲೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡೂ, ಇನ್ನೂ ತೆರೆಮರೆಯಲ್ಲೇ ಉಳಿದಿರುವ ವೀರರ ಶೌರ್ಯವನ್ನು ಈ ಸರಣಿಯಲ್ಲಿ ಪ್ರಸ್ತುತಪಡಿಸಲಾಗಿದೆ. 1948ರಲ್ಲಿ ವಾಸ್ಕೋ ಡ ಗಾಮಾ ಭಾರತಕ್ಕೆ ಕಾಲಿಟ್ಟ ದೃಶ್ಯದಿಂದಲೇ ಈ ಶೋ ಶುರುವಾಗುತ್ತದೆ. ಆಜಾದಿ ಕಾ ಅಮೃತ ಮಹೋತ್ಸವ ವಿಶೇಷವಾಗಿ ನಿರ್ಮಾಣ ಮಾಡಲಾದ ಈ ‘ಸ್ವರಾಜ್​: ಭಾರತ್ ಕೇ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ’ಕ್ಕೆ ಆಗಸ್ಟ್ 5ರಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್​ ಠಾಕೂರ್ ಚಾಲನೆ ಕೊಟ್ಟಿದ್ದಾರೆ. ಹಾಗೇ, ಆಗಸ್ಟ್​ 14ರಿಂದ ದೂರದರ್ಶನದಲ್ಲಿ ಪ್ರಸಾರ ಪ್ರಾರಂಭವಾಗಿದೆ.

ಅಂದಹಾಗೇ, ‘ಸ್ವರಾಜ್​: ಭಾರತ್ ಕೇ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ’ ಸರಣಿಯಲ್ಲಿ ರಾಣಿ ಅಬ್ಬಕ್ಕ, ಬಕ್ಷಿ ಜಗಬಂಧು, ಟಿರೋಟ್ ಸಿಂಗ್​, ಸಿಧು ಮುರ್ಮು, ಕನ್ಹು ಮುರ್ಮು, ಶಿವಪ್ಪ ನಾಯಕ, ಕಾನ್ಹೋಜಿ ಆಂಗ್ರೆ, ರಾಣಿ ಗೈಡಿನ್ಲಿಯು, ತಿಲ್ಕಾ ಮಾಝಿ ಅವರ ಹೋರಾಟದ ಕಥೆಯನ್ನು ವಿವರಿಸಲಾಗಿದೆ. ಇವರೆಲ್ಲ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ಮುನ್ನೆಲೆ ಬಾರದವರು. ಇವರೊಂದಿಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕತೆಯನ್ನೂ ಇದು ಹೇಳುತ್ತದೆ. ಈ ಶೋ ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಓರಿಯಾ, ಬೆಂಗಾಳಿ, ಅಸ್ಸಾಮೀ ಭಾಷೆಗಳಲ್ಲಿ ಕೂಡ ಡಬ್​ ಆಗಿದೆ. ಹೀಗೆ ಡಬ್​ ಆಗಿರುವ ಎಪಿಸೋಡ್​ಗಳು ಆಗಸ್ಟ್​ 20ರಿಂದ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: `ತಂಗಿʼಗೆ ನರೇಂದ್ರ ಮೋದಿ ಕೊಟ್ಟ 11 ರೂಪಾಯಿ, ಅರ್ಧ ಗಂಟೆಯಲ್ಲಿ 7.5 ಲಕ್ಷವಾಗಿತ್ತು !

Exit mobile version