ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪರಿಶ್ರಮ ಜೀವಿ, ಅವರು ಯಾವಾಗಲೂ ಒಂದಲ್ಲ ಒಂದು ಕೆಲಸ, ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂಬುದು ಜನಜನಿತವಾಗಿದೆ. ಮೋದಿ ಅವರ ಆಡಳಿತ, ವಿಚಾರಗಳನ್ನು ಟೀಕಿಸಿರುವವರೂ ಅವರ ಶ್ರಮ, ದಣಿವರಿಯದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವವರಿದ್ದಾರೆ. ಇದರ ಬೆನ್ನಲ್ಲೇ, ಕಳೆದ ಒಂಬತ್ತು ವರ್ಷದಲ್ಲಿ ನರೇಂದ್ರ ಮೋದಿ ಅವರು ಒಂದು ದಿನವೂ ರಜೆ (Narendra Modi Leave) ತೆಗೆದುಕೊಂಡಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅವರು ಎಷ್ಟು ರಜೆ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ. “ನರೇಂದ್ರ ಮೋದಿ ಅವರು ಯಾವಾಗಲೂ ಕಾಯಕದಲ್ಲಿ ತೊಡಗಿರುತ್ತಾರೆ. ಅವರು ಪ್ರಧಾನಿಯಾದ ಬಳಿಕ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ” ಎಂದು ಪಿಎಂಒ ಮಾಹಿತಿ ನೀಡಿದೆ.
ಪ್ರಫುಲ್ ಪಿ ಶಾರದಾ ಎಂಬುವರು 2023ರ ಜುಲೈ 31ರಂದು ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. 2015ರಲ್ಲಿಯೂ ನರೇಂದ್ರ ಮೋದಿ ಅವರ ರಜೆ ಕುರಿತು ಆರ್‌ಟಿಐ ಅಡಿಯಲ್ಲಿಯೇ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈಗ 2014ರ ಬಳಿಕ ಮೋದಿ ಅವರು ಯಾವುದೇ ರಜೆ ತೆಗೆದುಕೊಂಡಿಲ್ಲ ಎಂಬುದು ಬಹಿರಂಗವಾಗಿದೆ. ಇಷ್ಟು ಅವಧಿಯಲ್ಲಿ ಮೋದಿ 3 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: PM Narendra Modi: ನರೇಂದ್ರ ಮೋದಿ 73ನೇ ಜನುಮ ದಿನ; ಬಿಜೆಪಿಯಿಂದ ವಿಭಿನ್ನ ಕಾರ್ಯಕ್ರಮ ಆಯೋಜನೆ
ನರೇಂದ್ರ ಮೋದಿ ಅವರು ದಿನಕ್ಕೆ 18 ತಾಸು ಕೆಲಸ ಮಾಡುತ್ತಾರೆ, ಅವರು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಇದುವರೆಗೆ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರು ಆಗಾಗ ಹೇಳುತ್ತಾರೆ.