ನವದೆಹಲಿ: ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಪ್ರತಿಪಕ್ಷಗಳು ಒಗ್ಗೂಡಿ INDIA ಎಂಬ ಒಕ್ಕೂಟ ರಚಿಸಿವೆ. ಅತ್ತ ಬಿಜೆಪಿಯೂ ಸುಮ್ಮನೆ ಕುಳಿತಿಲ್ಲ. ಈಗಾಗಲೇ ಎನ್‌ಡಿಎ ಮೈತ್ರಿಪಕ್ಷಗಳ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ. ಹಾಗಾಗಿ, ಈ ಬಾರಿಯ ಲೋಕಸಭೆ ಚುನಾವಣೆಯ ಅಖಾಡ ರಂಗೇರುತ್ತಿದ್ದು, ಆಡಳಿತ ಪಕ್ಷಗಳು ಹಾಗೂ ಪ್ರತಿಪಕ್ಷಗಳ ನಡುವಿನ ರಾಜಕೀಯ ಮೇಲಾಟ ಶುರುವಿಟ್ಟುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕ ಜನ ಶಕ್ತಿ ಪಕ್ಷದ (ರಾಮ್ ವಿಲಾಸ್ ಪಾಸ್ವಾನ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ (Chirag Paswan) ಅವರನ್ನು ತಬ್ಬಿಕೊಂಡಿರುವುದಕ್ಕೆ ಕಾಂಗ್ರೆಸ್ ಟಾಂಗ್ ನೀಡಿದೆ.
“ನರೇಂದ್ರ ಮೋದಿ ಅವರು ತಮ್ಮ ಬಣದ ನಾಯಕರನ್ನು ಅಪ್ಪಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮೋದಿ ಹೀಗೆ ಮಾಡುತ್ತಿದ್ದಾರೆ. ತಮ್ಮ ಸಹೋದ್ಯೋಗಿಗಳಿಗೆ ಯಾವುದೇ ಕ್ರೆಡಿಟ್ ಕೊಡದ, ಅವರನ್ನು ಒಪ್ಪಿಕೊಳ್ಳದ ಮೋದಿ ಅವರು ವಿದೇಶಿ ನಾಯಕರನ್ನು ಮಾತ್ರ ತಬ್ಬಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಆ ಮೂಲಕ ತಾವೊಬ್ಬ ನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಆದರೆ, ಸಹಾನುಭೂತಿಯನ್ನು ಎಂದಿಗೂ ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ತಿರುಗೇಟು ನೀಡಿದ್ದಾರೆ.
ಚಿರಾಗ್ ಪಾಸ್ವಾನ್ ಟ್ವೀಟ್
माननीय प्रधानमंत्री जी , आपने मुझे गले लगा कर प्यार और सम्मान दिया इसके लिए मैं आपका ह्रदय से आभार प्रकट करता हूं।@narendramodi pic.twitter.com/qUOdtRZ5Ay
— युवा बिहारी चिराग पासवान (@iChiragPaswan) July 18, 2023
ಮಂಗಳವಾರ (ಜುಲೈ 18) ಪ್ರತಿಪಕ್ಷಗಳ ಒಕ್ಕೂಟ ಹಾಗೂ ಎನ್‌ಡಿಎ ಮೈತ್ರಿಪಕ್ಷಗಳು ಸಭೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿವೆ. ಇದೇ ವೇಳೆ, ಇತ್ತೀಚೆಗಷ್ಟೇ ಎನ್‌ಡಿಎಗೆ ಬೆಂಬಲ ಸೂಚಿಸಿದ ಚಿರಾಗ್ ಪಾಸ್ವಾನ್ ಅವರನ್ನು ನರೇಂದ್ರ ಮೋದಿ ಅವರು ತಪ್ಪಿಕೊಂಡಿದ್ದರು. ಈ ಫೋಟೊಗಳನ್ನು ಚಿರಾಗ್ ಪಾಸ್ವಾನ್ ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು ಹಾಗೂ ಫೋಟೊಗಳು ವೈರಲ್ ಆಗಿದ್ದವು.
ಕಾಂಗ್ರೆಸ್ ತಿರುಗೇಟು
The Rahul Gandhi impact.
— Supriya Shrinate (@SupriyaShrinate) July 19, 2023
Modi forced to hug his own leaders – a first for him.
A man who refuses to acknowledge his colleagues – and forcibly hugs only world leaders on overseas travel – is forced to appear human.
But compassion can’t be contrived.
ಇದನ್ನೂ ಓದಿ: Opposition Meet: ಯಾವ ಪಕ್ಷ ಯಾವ ಕೂಟದಲ್ಲಿದೆ? ‘ಎನ್‌ಡಿಎ’, ‘ಇಂಡಿಯಾ’ ಪರ ಇರುವ ಪಕ್ಷಗಳೆಷ್ಟು?
ಎನ್‌ಡಿಎ ಮಿತ್ರಪಕ್ಷಗಳ ಸಭೆಯಲ್ಲಿ 39 ಪಕ್ಷಗಳು ಭಾಗವಹಿಸಿದ್ದವು. ಇದೇ ವೇಳೆ ನರೇಂದ್ರ ಮೋದಿ ನೇತೃತ್ವದಲ್ಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಅತ್ತ, ಪ್ರತಿಪಕ್ಷಗಳ ಒಕ್ಕೂಟದಲ್ಲೂ ಒಬ್ಬ ನಾಯಕನನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗಿದೆ. ಒಟ್ಟಿನಲ್ಲಿ ಮಂಗಳವಾರ ನಡೆದ ಸಭೆಗಳು ಎನ್‌ಡಿಎ ಹಾಗೂ ಪ್ರತಿಪಕ್ಷಗಳು ಚುನಾವಣೆ ಕಹಳೆ ಊದಲು ವೇದಿಕೆಯಾಗಿದೆ.