ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನ (National Technology Day) 2023 ಕಾರ್ಯಕ್ರಮವನ್ನು ಉದ್ಘಾಟಿಸಿ, 5,800 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅಡಿಪಾಯ ಹಾಕಿದರು. ಕೆಲವು ಯೋಜನೆಗಳಿಗೂ ಚಾಲನೆ ನೀಡಿದರು.
ಈ ಬಾರಿಯ ರಾಷ್ಟ್ರೀಯ ತಂತ್ರಜ್ಞಾನ ದಿನದ 25ನೇ ವರ್ಷದ ಆಚರಣೆಯಾಗಿದೆ. ಹಾಗಾಗಿ ಈ ವರ್ಷ ಮೇ 11ರಿಂದ 14ರವರೆಗೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಪ್ರಧಾನಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಉಪಸ್ಥಿತರಿದ್ದರು.
ಇದನ್ನೂ ಓದಿ: Karnataka Election : ಮೋದಿ 4 ಬಾರಿ ಸಿಎಂ, 2 ಬಾರಿ ಪಿಎಂ ಆದ್ರಲ್ವಾ? ಅಧಿಕಾರ ಬಿಟ್ಕೊಡ್ತಾರಾ; ಶೆಟ್ಟರ್ ಪ್ರಶ್ನೆ
ದೇಶದಲ್ಲಿ ವೈಜ್ಞಾನಿಕ ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಈ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಷನಲ್-ವೇವ್ ಅಬ್ಸರ್ವೇಟರಿ-ಇಂಡಿಯಾ (LIGO-ಇಂಡಿಯಾ), ಹಿಂಗೋಲಿ; ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಒಡಿಶಾದ ಜತ್ನಿ, ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಪ್ಲಾಟಿನಂ ಜುಬಿಲಿ ಬ್ಲಾಕ್ ಸೇರಿದಂತೆ ಹಲವು ಯೋಜನೆಗಳು ಇವುಗಳಲ್ಲಿ ಸೇರಿಕೊಂಡಿವೆ.
ಈ ರಾಷ್ಟ್ರೀಯ ತಂತ್ರಜ್ಞಾನ ದಿನದ ಆಚರಣೆಯನ್ನು 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಆರಂಭಿಸಲಾಯಿತು. ಆಗ ಪೋಖ್ರಾನ್ ಪರೀಕ್ಷೆಯನ್ನು ಯಶಸ್ವಿ ಮಾಡುವುದಕ್ಕೆ ಶ್ರಮಿಸಿದ ಭಾರತೀಯ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಗೌರವಿಸುವ ನಿಟ್ಟಿನಲ್ಲಿ ಈ ದಿನಾಚರಣೆಯನ್ನು ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ಹೊಸ ಮತ್ತು ವಿಭಿನ್ನ ಥೀಮ್‌ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ‘ಸ್ಕೂಲ್ ಟು ಸ್ಟಾರ್ಟಪ್ಸ್- ಇಗ್ನೈಟಿಂಗ್ ಯಂಗ್ ಮೈಂಡ್ಸ್ ಟು ಇನ್ನೋವೇಟ್’ ಆಗಿದೆ.