ಅಹ್ಮದಾಬಾದ್: ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ಪ್ರಮುಖ್ ಆಗಿದ್ದ ಸ್ವಾಮಿ ಮಹಾರಾಜರ ಜನ್ಮಶತಾಬ್ದಿ ಮಹೋತ್ಸವ ಇತ್ತೀಚೆಗಷ್ಟೇ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಪೆನ್ನಿನ ವಿಷಯ ತಿಳಿಸಿದ್ದಾರೆ. ತನ್ಮೂಲಕ ಸ್ವಾಮಿ ಮಹಾರಾಜರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.
‘ನಾನು 2002ರಲ್ಲಿ ಮೊದಲ ಬಾರಿಗೆ ರಾಜ್ಕೋಟ್ನಿಂದ ಉಪ ಚುನಾವಣೆಗೆ ಸ್ಪರ್ಧಿಸಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಮಯದಲ್ಲಿ ನನಗೆ ಎರಡು ಪೆನ್ಗಳು ಬಂದವು. ಅದರಲ್ಲಿ ಒಂದರ ಮೇಲೆ ಸ್ವಾಮಿ ಮಹಾರಾಜ್ ಅವರ ಹೆಸರು ಇತ್ತು. ‘ಇದೇ ಪೆನ್ನಿಂದ ನಾಮಪತ್ರಕ್ಕೆ ಸಹಿ ಹಾಕುವಂತೆ ಸ್ವಾಮಿ ಮಹಾರಾಜ್ ವಿನಂತಿಸಿದ್ದಾರೆ’ ಎಂದು ಬರೆಯಲಾಗಿತ್ತು. ನಾನು ಹಾಗೇ ಮಾಡಿದೆ. ಅಷ್ಟೇ ಅಲ್ಲ, ಪ್ರತಿ ವಿಧಾನಸಭೆ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಸುವಾಗ ಇದೇ ಪೆನ್ನಿಂದ ಸಹಿ ಹಾಕುತ್ತಿದ್ದೆ. ಬಳಿಕ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸ್ಪರ್ಧಿಸಿದಾಗಲೂ ನನಗೆ ಸ್ವಾಮಿ ಮಹಾರಾಜ್ ಅವರಿಂದ ಪೆನ್ಗಳು ಉಡುಗೊರೆಯಾಗಿ ಬಂದಿವೆ. ಆ ಪೆನ್ಗಳೆಲ್ಲ ಬಿಜೆಪಿ ಪಕ್ಷದ ಬಣ್ಣದಲ್ಲೇ ಇರುತ್ತಿದ್ದವು. ಅವರು ಕೊಟ್ಟ ಪೆನ್ನಿಂದಲೇ ಈಗಲೂ ನನ್ನ ನಾಮಪತ್ರಗಳಿಗೆ ಸಹಿ ಮಾಡುತ್ತಿದ್ದೇನೆ. ಸ್ವಾಮಿ ಮಹಾರಾಜ್ ಅವರು ನನ್ನನ್ನು ತಮ್ಮ ಪುತ್ರನಂತೆ ನಡೆಸಿಕೊಂಡರು’ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಜೀವನ ಯಾವತ್ತೂ ಇಳಿಮುಖ ಆಗಲೇ ಇಲ್ಲ. ಪಕ್ಷಸಂಘಟನೆಯಿಂದ ಪ್ರಾರಂಭ ಮಾಡಿ, ಅಂದಿನ ರಾಜ್ಕೋಟ್ನಿಂದ ಇಂದಿನ ವಾರಾಣಸಿಯವರೆಗೆ ಅವರು ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ದೇಶದ ಪ್ರಧಾನಿಯೂ ಆಗಿದ್ದಾರೆ. ಅವರೀಗ ತಾವು ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವಾಗ ಯಾವ ಪೆನ್ ಬಳಸುತ್ತಿದ್ದೆ ಎಂಬ ಗುಟ್ಟು ಹೇಳಿದ್ದಾರೆ. ಸ್ವಾಮಿ ಮಹಾರಾಜರು ಪೆನ್ ಮೂಲಕ ಪ್ರತಿ ಚುನಾವಣೆಯಲ್ಲೂ ನನ್ನನ್ನು ಆಶೀರ್ವದಿಸಿದರು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.
ಹಿಂದು ಸ್ವಾಮಿ ನಾರಾಯಣ ಸಮುದಾಯದ ಪ್ರಸಿದ್ಧ ಅಧ್ಯಾತ್ಮ ಸಂಸ್ಥೆಯಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ 5ನೇ ಅಧ್ಯಾತ್ಮ ಗುರುವಾಗಿದ್ದ ಪ್ರಮುಖ್ ಆಗಿದ್ದ ಸ್ವಾಮಿ ಮಹಾರಾಜ್ ಅವರು 1950ರಿಂದ 2016ರವರೆಗೆ ಅಧ್ಯಕ್ಷರಾಗಿದ್ದರು. ಇವರ ಆಡಳಿತ ಅವಧಿಯಲ್ಲಿ ಅಟ್ಲಾಂಟಾ, ಲಾಸ್ ಏಂಜಲೀಸ್, ಲಂಡನ್, ಟೊರೊಂಟೊ, ಆಕ್ಲೆಂಡ್ ಮತ್ತು ಸಿಡ್ನಿಗಳಲ್ಲಿ ಈ ಸಂಸ್ಥೆಯಿಂದ ಅಕ್ಷರಧಾಮ ದೇವಾಲಯಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: Yuvajanotsava | ಯುವಜನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ: ಸಿಎಂ ಬೊಮ್ಮಾಯಿ