ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಇಂದು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚೆನ್ನೈನ ನುಂಗಂಬಾಕ್ಕಂನ ಹಡೋಸ್ ರಸ್ತೆಯಲ್ಲಿರುವ ಅವರ ಮನೆಯಲ್ಲೇ ನಿಧನರಾಗಿದ್ದಾರೆ. ವಾಣಿ ಜಯರಾಂ ಹಣೆಗೆ ಗಾಯವಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕನ್ನಡ, ತಮಿಳು, ತೆಲುಗು, ಭೋಜಪುರಿ, ಮಲಯಾಳಂ, ಹಿಂದಿ, ಉರ್ದು ಸೇರಿ ಅನೇಕ ಭಾಷೆಗಳಲ್ಲಿ ಹಾಡಿದ್ದ ಹೆಗ್ಗಳಿಕೆ ಇವರದ್ದು.
10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ವಾಣಿ ಜಯರಾಂ ಅವರಿಗೆ ಇದೇ ವರ್ಷದ ಜನವರಿ 26ರಂದು ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗಿತ್ತು. ಅವರು ಪ್ರಶಸ್ತಿ ಸ್ವೀಕರಿಸುವುದು ಬಾಕಿ ಇತ್ತು. ಆದರೆ ಅಷ್ಟರಲ್ಲಿ ಅವರ ನಿಧನದ ಸುದ್ದಿ ಬಂದಿದ್ದು, ಲಕ್ಷಾಂತರ ಅಭಿಮಾನಿಗಳಿಗೆ ಇದೊಂದು ಶಾಕ್ ಆಗಿದೆ. ಸದ್ಯ ಅವರ ಮೃತದೇಹ ಚೆನ್ನೈನ ನಿವಾಸದಲ್ಲಿ ಹಣೆಗೆ ಗಾಯವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹೇಗೆ ಮೃತಪಟ್ಟಿದ್ದಾರೆ ಎಂದು ನಿಖರವಾಗಿಲ್ಲ. 2018ರಲ್ಲಿ ಅವರ ಪತಿ ತೀರಿಕೊಂಡಿದ್ದರು.
ಇದನ್ನೂ ಓದಿ: Paco Rabanne: ಪ್ರಸಿದ್ಧ ವಸ್ತ್ರ ವಿನ್ಯಾಸಕ ಪ್ಯಾಕೋ ರಬನ್ನೆ ನಿಧನ
ವಾಣಿ ಜಯರಾಂ ಅವರು ಹುಟ್ಟಿದ್ದು 1945ರಲ್ಲಿ. ಅವರ ಮೂಲ ಹೆಸರು ಕಲಿವಾಣಿ. ಅಪ್ಪನ ಹೆಸರು ದೊರೆಸ್ವಾಮಿ ಅಯ್ಯಂಗಾರ್ ಮತ್ತು ತಾಯಿ ಪದ್ಮಾವರಿ. ಕಲಿವಾಣಿ (ವಾಣಿ ಜಯರಾಂ) ಹುಟ್ಟಿದ್ದು ಸಂಗೀತ ಕುಟುಂಬದಲ್ಲೇ ಆಗಿದ್ದರಿಂದ ಸಹಜವಾಗಿಯೇ ಅವರಿಗೆ ಸಂಗೀತಾಸಕ್ತಿ ಇತ್ತು. ಮೊಟ್ಟಮೊದಲು ಹಿನ್ನೆಲೆ ಗಾಯಕಿಯಾಗಿ ಅವರು 1971ರಲ್ಲಿ ವೃತ್ತಿ ಜೀವನ ಪ್ರಾರಂಭ ಮಾಡಿದರು. ಸುಮಾರು 50 ವರ್ಷಗಳ ಕಾಲ, 19 ಭಾಷೆಗಳಲ್ಲಿ ಹಾಡಿದ್ದಾರೆ. ರಾಷ್ಟ್ರಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದ್ದಾರೆ. ಎಂ.ಎಸ್.ವಿಶ್ವನಾಥನ್, ಕೆ.ವಿ.ಮಹದೇವನ್, ಚಕ್ರವರ್ತಿ, ಇಳಯರಾಜ, ಸತ್ಯಂ ಸೇರಿ ಹಲವು ದಿಗ್ಗಜ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡಿದ್ದಾರೆ.