ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ (National Herald Case) ರಾಹುಲ್ ಗಾಂಧಿಯನ್ನು ಇ. ಡಿ. ವಿಚಾರಣೆ ನಡೆಸುತ್ತಿರುವದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಗಾಂಧಿ ಕುಟುಂಬವೇನೂ ಪ್ರಶ್ನಾತೀತವಲ್ಲ. ರಾಹುಲ್ ಗಾಂಧಿಯನ್ನು ವಿಚಾರಣೆ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಇಷ್ಟು ದೊಡ್ಡಮಟ್ಟದ ಪ್ರತಿಭಟನೆ ಅಗತ್ಯವೇನಿದೆ ಎಂದು ಪ್ರಶ್ನಿಸಿದೆ. ಇಂದು ರಾಹುಲ್ ಗಾಂಧಿ ನಾಲ್ಕನೇ ಸುತ್ತಿನ ಇ.ಡಿ.ವಿಚಾರಣೆಗೆ ಹಾಜರಾಗಿದ್ದಾರೆ. ಅದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್, ʼಇ.ಡಿ. ಸಿಬಿಐಗಳೆಲ್ಲ ಗ್ಲೋ ಆ್ಯಂಡ್ ಲವ್ಲಿ ಬಾಕ್ಸ್ ಇಟ್ಟುಕೊಂಡಿವೆ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತವೆ. ಯಾರು ಸುಮ್ಮನೆ ಇರುತ್ತಾರೋ, ಅವರ ವಿರುದ್ಧದ ಅಪವಾದಗಳನ್ನು ಇದೇ ಗ್ಲೋ ಆ್ಯಂಡ್ ಲವ್ಲಿ ಸ್ಕೀಮ್ ಮೂಲಕ ಅಳಿಸಿ ಹಾಕುತ್ತವೆʼ ಎಂದು ವ್ಯಂಗ್ಯವಾಡಿದ್ದರು. ಅದಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ʼಈ ದೇಶದಲ್ಲಿ ಯಾರೂ ವಿಕ್ಟೋರಿಯಾ ರಾಣಿಯಲ್ಲ, ರಾಜಕುಮಾರನೂ ಅಲ್ಲ. ಕಾನೂನು ಎಲ್ಲರಿಗೂ ಒಂದೇ. ಭ್ರಷ್ಟಾಚಾರ ಮಾಡಿದವರ ವಿರುದ್ಧ ತನಿಖೆ ನಡೆದೇ ನಡೆಯುತ್ತದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಗಾಂಧಿ ಕುಟುಂಬ ಈ ದೇಶದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಪ್ರತಿಯೊಬ್ಬರಿಗೂ ಗೊತ್ತುʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇ ಡಿ ಬಳಿ ಇದೆ ʼಗ್ಲೋ ಆ್ಯಂಡ್ ಲವ್ಲಿ ಸ್ಕೀಮ್ʼ ಬಾಕ್ಸ್; ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ವ್ಯಂಗ್ಯ
ಇ.ಡಿ. ಎಂದರೆ ಜಾರಿ ನಿರ್ದೇಶನಾಲಯವೇ ಹೊರತು ನಮ್ಮ ಹಕ್ಕುಗಳ ಬಗ್ಗೆ ಬೇಡಿಕೆ ಇಡುವ ಸ್ಥಳವಲ್ಲ ಎಂದು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕು. ನಾವು ಈ ದೇಶದ ಮೊದಲ ಕುಟುಂಬಕ್ಕೆ ಸೇರಿದವರು, ನಮ್ಮನ್ನು ಅದು ಹೇಗೆ ತನಿಖೆ ಮಾಡುತ್ತಾರೆ? ಎಂಬ ಮನೋಭಾವ ಗಾಂಧಿ ಕುಟುಂಬದ್ದು. ಆದರೆ ಅವರೂ ವಿಚಾರಣೆಗೆ ಒಳಪಡಬೇಕು ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ ಎಂದು ಸಂಬಿತ್ ಪಾತ್ರಾ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಮಾತನಾಡಿದ್ದ ಅಜಯ್ ಮಾಕೆನ್, ʼರಾಹುಲ್ ಗಾಂಧಿಯನ್ನು 30 ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. ಮತ್ತೆ ಇಂದು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಲಾಗಿದೆ. ನಾವು ಪ್ರತಿಭಟನೆ ನಡೆಸಿದ್ದೇವೆ ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಎಐಸಿಸಿ ಪ್ರಧಾನ ಕಚೇರಿ ಮೇಲೆಯೂ ದಾಳಿ ಮಾಡಿದರು. ಅವರು ಬೇರೆ ಯಾವುದಾದರೂ ರಾಜಕೀಯ ಪಕ್ಷಗಳ ಕಚೇರಿ ಮೇಲೆ ದಾಳಿ ಮಾಡುತ್ತಾರಾ? ಎಂದು ಕಟುವಾಗಿ ಪ್ರಶ್ನಿಸಿದ್ದರು.
ಇದನ್ನೂ ಓದಿ: Agnipath | ಮೋದಿ ಮತ್ತೆ ಮಾಫಿವೀರ್ ಆಗಲಿ ಎಂದ ರಾಹುಲ್ ಗಾಂಧಿ; ಜೂ.19ಕ್ಕೆ ಕಾಂಗ್ರೆಸ್ ಸತ್ಯಾಗ್ರಹ