ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ (National Herald Case) ಸಂಬಂಧಿಸಿ ಸತತ ಮೂರು ದಿನ ಇ.ಡಿ ವಿಚಾರಣೆಗೆ ಒಳಪಟ್ಟ ಬಳಿಕ ರಾಹುಲ್ ಗಾಂಧಿ, ಈ ಹಗರಣವನ್ನು ಮೋತಿಲಾಲ್ ವೋರಾ ಅವರ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಐಸಿಸಿ ಖಜಾಂಚಿಯಾಗಿದ್ದ ಮೋತಿಲಾಲ್ ವೋರಾ ಅವರು ೨೦೨೦ರಲ್ಲಿ ಮೃತಪಟ್ಟಿದ್ದಾರೆ.
ನೀವು ಕೇಳುತ್ತಿರುವುದೆಲ್ಲ ಮೋತಿಲಾಲ್ ವೋರಾಗೆ ಸಂಬಂಧಿಸಿದ ವಿಚಾರ ಎಂದು ಇ.ಡಿ ಅಧಿಕಾರಿಗಳಿಗೆ ರಾಹುಲ್ ಗಾಂಧಿ ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನಿಂದ (AJL) ಯಂಗ್ ಇಂಡಿಯಾಕ್ಕೆ ಹಸ್ತಾಂತರ ಮಾಡುವಾಗ ನಡೆದ ಎಲ್ಲ ವ್ಯವಹಾರ-ವಹಿವಾಟುಗಳ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಮೋತಿಲಾಲ್ ವೋರಾ ಎಂದವರು ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋತಿಲಾಲ್ ವೋರಾ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು ಮತ್ತು ನೆಹರೂ ಕುಟುಂಬಕ್ಕೆ ಆಪ್ತರಾಗಿದ್ದವರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಲ್ಪಾವಧಿಗೆ ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಸಚಿವರೂ ಆಗಿದ್ದರು. 1985-1989ರವರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಆ ಬಳಿಕ ಸೋನಿಯಾ ಗಾಂಧಿಯವರ ಜತೆಗೇ ಮೋತಿಲಾಲ್ ವೋರಾ ಹೆಜ್ಜೆ ಹಾಕುತ್ತಿದ್ದರು. ಆ ಮಟ್ಟಿಗೆ ಅವರು ಗಾಂಧಿ ಕುಟುಂಬಕ್ಕೆ ತೀರಾ ಹತ್ತಿರದವರು. 2020ರಲ್ಲಿ ಕೋವಿಡ್ 19 ಸೋಂಕಿನಿಂದ ವೋರಾ ಮೃತಪಟ್ಟಿದ್ದಾರೆ. ಅವರ ಹೆಸರನ್ನು ಈಗ ರಾಹುಲ್ ಗಾಂಧಿ ಇ.ಡಿ ಎದುರು ಹೇಳಿದ್ದಾರೆ. ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನ ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಯಂಗ್ ಇಂಡಿಯಾಕ್ಕೆ ವರ್ಗಾವಣೆ ಮಾಡಿದ ಹೊತ್ತಲ್ಲಿ ಅದರ ಹೊಣೆ ಹೊತ್ತಿದ್ದು ಮೋತಿಲಾಲ್ ವೋರಾ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ: National Herald: ರಾಹುಲ್ ಗಾಂಧಿಗೆ ಇ.ಡಿ ಫುಲ್ ಗ್ರಿಲ್; ದೇಶಾದ್ಯಂತ ಕೈ ಪ್ರತಿಭಟನೆಯ ಸವಾಲ್
ಮೋತಿಲಾಲ್ ವೋರಾಗೆ ನ್ಯಾಷನಲ್ ಹೆರಾಲ್ಡ್ ಕೇಸ್‌ಗೆ ನಂಟಿಲ್ಲ ಎಂದಲ್ಲ. ಇವರನ್ನೂ ಕೂಡ ಹಿಂದೆ ಇ.ಡಿ ವಿಚಾರಣೆಗೆ ಒಳಪಡಿಸಿತ್ತು. 2010ರಲ್ಲಿ ಯಂಗ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು. ಇದನ್ನು ಸ್ಥಾಪನೆ ಮಾಡಿದ್ದು ರಾಹುಲ್ ಗಾಂಧಿ. ಕಂಪನಿಯಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪಾಲು ಶೇ.76ರಷ್ಟಿದ್ದರೆ, ಉಳಿದ ಶೇ.24ರಷ್ಟು ಪಾಲನ್ನು ಹೊಂದಿದ್ದು ಇದೇ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್.
ಈಗ ರಾಹುಲ್ ಗಾಂಧಿ ಅವರು ಮೋತಿಲಾಲ್ ಹೆಸರು ಹೇಳಿ ನುಣುಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ʼಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನಿಂದ ಯಂಗ್ ಇಂಡಿಯಾಕ್ಕೆ ಆಸ್ತಿ ವರ್ಗಾವಣೆಯಾಗುವಾಗ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ವರದಿ ನೀಡಿದೆ. ಆದರೆ ವಹಿವಾಟಿನಲ್ಲಿ ಅಕ್ರಮ ನಡೆದ ಬಗ್ಗೆ ನನಗೆ ವೈಯಕ್ತಿಕವಾಗಿ ಯಾವುದೇ ಮಾಹಿತಿ ಇಲ್ಲ. ಎಲ್ಲವನ್ನೂ ಮೋತಿಲಾಲ್ ವೊರಾ ಅವರೇ ನೋಡಿಕೊಳ್ಳುತ್ತಿದ್ದರುʼ ಎಂದು ರಾಹುಲ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಸ್ತಾರ Explainer | ಕಾಂಗ್ರೆಸ್ ಕೊರಳಿಗೆ ಮತ್ತೆ ಸುತ್ತಿಕೊಂಡಿದೆ ನ್ಯಾಷನಲ್ ಹೆರಾಲ್ಡ್ ಉರುಳು!