ನವ ದೆಹಲಿ: 2019ರಲ್ಲಿ ನೀಡಿದ್ದ ಹೇಳಿಕೆ ಕೇಸ್ನಲ್ಲಿ ದೋಷಿ ಎಂದು ಸಾಬೀತಾಗಿರುವ ರಾಹುಲ್ ಗಾಂಧಿ (Rahul Gandhi) ಯನ್ನು ಮಾ.24ರಂದು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಲೋಕಸಭೆ ಆದೇಶ ನೀಡಿದೆ. ಕೋರ್ಟ್ ತೀರ್ಪು ಬಂದ 24ಗಂಟೆಯಲ್ಲಿ ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯನ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು (Rahul gandhi disqualified) ಕಾಂಗ್ರೆಸ್ ನಾಯಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಕ್ರಮದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸುವುದಾಗಿ ಘೋಷಿಸಿದ್ದಾರೆ.
‘ರಾಹುಲ್ ಗಾಂಧಿಯವರ ಲೋಕಸಭೆ ಸದಸ್ಯತ್ವ ಅನರ್ಹತೆ ವಿರೋಧಿಸಿ ಸೋಮವಾರ (ಮಾ.27)ದಿಂದ ಕಾಂಗ್ರೆಸ್ ಘಟಕಗಳು, ಪಕ್ಷದ ಎಲ್ಲ ಮುಂಚೂಣಿ ಸಂಘಟನೆಗಳಿಂದ ದೇಶಾದ್ಯಂತ ಆಂದೋಲನ ನಡೆಸಲಾಗುವುದು’ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ. ಇನ್ನು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರವಾದ ವಯಾನಾಡ್ನಲ್ಲಿ ಇಂದು ಬ್ಲ್ಯಾಕ್ ಡೇ (ಕರಾಳ ದಿನ) ಎಂದು ಪರಿಗಣಿಸಲಾಗುವುದು ಎಂದು ಅಲ್ಲಿನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಡಿ.ಅಪ್ಪಚ್ಚಾನ್ ತಿಳಿಸಿದ್ದಾರೆ.
ಇದನ್ನೂ ಓದಿ: Rahul Gandhi Disqualified: ರಾಹುಲ್ ಗಾಂಧಿ ಅನರ್ಹರಾಗಲು ಕಾರಣರಾದ ಆ ‘ಮೋದಿ’ ಯಾರು?
2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡುವಾಗ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದರು. ‘ಎಲ್ಲ ಕಳ್ಳರ ಹೆಸರೂ ಮೋದಿ ಎಂಬ ಸರ್ನೇಮ್ನಿಂದಲೇ ಪ್ರಾರಂಭವಾಗುತ್ತದೆ ಯಾಕೆ? ಈ ಬಗ್ಗೆ ನನಗೆ ಅಚ್ಚರಿಯಾಗುತ್ತದೆ ಎಂದು ಹೇಳಿದ್ದರು. ಆದರೆ ರಾಹುಲ್ ಗಾಂಧಿ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆ ಕೇಸ್ನ ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ಮಾ.23ರಂದು ತೀರ್ಪು ನೀಡಿ, ರಾಹುಲ್ ಗಾಂಧಿಯನ್ನು ದೋಷಿ ಎಂದು ಪರಿಗಣಿಸಿದೆ. 2 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದೆ. 30 ದಿನಗಳ ಜಾಮೀನು ನೀಡಿದೆ.
ಕಾಂಗ್ರೆಸ್ ಕೆಂಡಾಮಂಡಲ
ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕೆಂಡಾಮಂಡಲರಾಗಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಛತ್ತೀಸ್ಗಢ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಲಭೆ ಸೃಷ್ಟಿಸಿದ್ದಾರೆ. ಕೋರ್ಬಾ ಜಿಲ್ಲೆಯಲ್ಲಿರುವ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಿ, ಧ್ವಂಸಗೊಳಿಸಿದ್ದಾರೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ಬೇಕಾಬಿಟ್ಟಿ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಎಚ್ಚರಿಕೆಯ ಪಾಠ