ನವ ದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕ ಕನ್ಹಯ್ಯ ಲಾಲ್‌ನ ತಲೆ ಕಡಿದು ಅತ್ಯಂತ ಕ್ರೌರ್ಯದಿಂದ ಹತ್ಯೆ ಮಾಡಿರುವುದರ ಬೆನ್ನಲ್ಲೇ, ಇಸ್ಲಾಂ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ನವೀನ್ ಜಿಂದಾಲ್‌ಗೂ ಶಿರಚ್ಛೇದದ ಬೆದರಿಕೆ ಬಂದಿದೆ.
ಇಂದು (ಜೂ.29) ಬೆಳಗ್ಗೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಬಂದಿದೆ. ಆ ಸ್ಕ್ರೀನ್ ಶಾಟ್‌ಅನ್ನು ನವೀನ್ ಜಿಂದಾಲ್ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ಇಂದು ಮುಂಜಾನೆ 6.43ರ ವೇಳೆಯಲ್ಲಿ ನನಗೆ ಮೂರು ಇ-ಮೇಲ್‌ಗಳು ಬಂದಿವೆ. ಉದಯಪುರದಲ್ಲಿ ಕನ್ಹಯ್ಯ ಲಾಲ್ ಅವರ ತಲೆ ಕತ್ತರಿಸಿರುವ ವಿಡಿಯೋವನ್ನು ಇ-ಮೇಲ್ ಜತೆಗೆ ಲಗತ್ತಿಸಲಾಗಿದೆ. ಕನ್ಹಯ್ಯ ಆಯಿತು ಈಗ ನಿನ್ನ ಸರದಿ ಎಂದು ಎಚ್ಚರಿಕೆ ನೀಡಿದ್ದಾರೆ. ನನ್ನಿಡೀ ಕುಟುಂಬದವರ ಶಿರಚ್ಛೇದ ಮಾಡುವುದಾಗಿಯೂ ಹೇಳಿದ್ದಾರೆ” ಎಂದು ಅವರು ಬರೆದುಕೊಂಡಿದ್ದಾರೆ.
ಜ್ಞಾನವಾಪಿ ಮಸೀದಿ ಕೇಸ್ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನೂಪುರ್ ಶರ್ಮಾ ದೃಶ್ಯ ಮಾಧ್ಯಮವೊಂದಕ್ಕೆ ಚರ್ಚೆಗೆ ಹೋಗಿದ್ದರು. ಅಲ್ಲಿ ಅವರು ಪ್ರವಾದಿ ಮೊಹಮ್ಮದ್‌ರಿಗೆ ಅವಮಾನ ಆಗುವ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇತ್ತ ಬಿಜೆಪಿಯ ದೆಹಲಿ ಮಾಧ್ಯಮ ಉಸ್ತುವಾರಿಯಾಗಿದ್ದ ನವೀನ್‌ಕುಮಾರ್ ಜಿಂದಾಲ್ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಸ್ಲಾಂ ವಿರುದ್ಧದ ಪೋಸ್ಟ್ ಹಾಕಿದ್ದರು. ಇವರಿಬ್ಬರ ಕಾರಣಕ್ಕೆ ದೇಶದಲ್ಲಿ ಇಸ್ಲಾಂ ಸಮುದಾಯದವರ ಪ್ರತಿಭಟನೆ ಮಿತಿಮೀರಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯು ನವೀನ್ ಜಿಂದಾಲ್ ಮತ್ತು ನೂಪುರ್ ಶರ್ಮಾರನ್ನು ಪಕ್ಷದಿಂದ ಹೊರ ಹಾಕಿತ್ತು. ಈಗ ಇವರಿಬ್ಬರಿಗೂ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ. ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ಗೆ ಭದ್ರತೆ ಒದಗಿಸಲಾಗಿದೆ.
೪ ದಿನಗಳಲ್ಲಿ ಗಲ್ಲಿಗೇರಿಸಿ
ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳನ್ನು ಇನ್ನು 4 ದಿನಗಳಲ್ಲಿ ಗಲ್ಲಿಗೇರಿಸಬೇಕು ಎಂದು ರಾಜಸ್ಥಾನ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಆಗ್ರಹಿಸಿದ್ದಾರೆ. ನಿನ್ನೆ ಘಟನೆ ನಡೆದಾಗಿನಿಂದಲೂ ನಾನು ಒಳಗೊಳಗೇ ಕುದಿಯುತ್ತಿದ್ದೇನೆ. ಆರೋಪಿಗಳನ್ನು ಕೊಲ್ಲಬೇಕು. ಇನ್ನು ನಾಲ್ಕು ದಿನಗಳಲ್ಲಿ ಅವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಂತಕರಿಗೆ ಹತ್ಯೆಯ ಮೂಲಕವೇ ಪಾಠ ಕಲಿಸಬೇಕು; ಶಿರಚ್ಛೇದ ಘಟನೆಗೆ ಬಿಜೆಪಿ ನಾಯಕ ಈಶ್ವರಪ್ಪ ಆಕ್ರೋಶ