ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿ ವಿ.ಕೆ. ಪಾಂಡಿಯನ್ (VK Pandian) ಅವರು ಸ್ವಯಂ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಅವರು ಬಿಜು ಜನತಾದಳ (BJD) ಸೇರುತ್ತಾರೆ. ಆ ಮೂಲಕ ಅವರು ರಾಜಕೀಯಕ್ಕೆ ಕಾಲಿಡುತ್ತಾರೆ ಎಂಬೆಲ್ಲ ವದಂತಿಗಳಿಗೆ ತೆರೆ ಬಿದ್ದಿದೆ. ನವೀನ್ ಪಟ್ನಾಯಕ್ (Naveen Patnaik) ಆಪ್ತರೂ ಆಗಿರುವ ವಿ.ಕೆ.ಪಾಂಡಿಯನ್ ಅವರಿಗೆ ರಾಜ್ಯ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ರಾಜ್ಯದ ಐದು ಟಿ (5 T) ಪರಿವರ್ತನೆ ಯೋಜನೆಗಳಿಗೆ ಹಾಗೂ ನವೀನ್ ಒಡಿಶಾ ಸ್ಕೀಮ್ ಚೇರ್ಮನ್ ಆಗಿ ವಿ.ಕೆ. ಪಾಂಡಿಯನ್ ಅವರನ್ನು ನೇಮಿಸಲಾಗಿದೆ. ಒಡಿಶಾದ ಸಾಮಾನ್ಯ ಆಡಳಿತ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆಯು ಐಎಎಸ್ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಇದು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಇರುವ ಹುದ್ದೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Odisha CM's close aide VK Pandian gets cabinet minister rank after voluntary retirement from IAS
— ANI Digital (@ani_digital) October 24, 2023
Read @ANI Story | https://t.co/d3sq4TsH1v#Odisha #VKPandian #NaveenPatnaik pic.twitter.com/JkZgLDb0Np
ನವೀನ್ ಪಟ್ನಾಯಕ್ ಅವರ ಆಪ್ತರಾಗಿರುವ ವಿ.ಕೆ.ಪಾಂಡಿಯನ್ ಅವರು ಏಕಾಏಕಿ ಸ್ವಯಂ ನಿವೃತ್ತಿ ಘೋಷಿಸುತ್ತಲೇ ಹಲವು ವದಂತಿಗಳು ಹರಡಿದ್ದವು. ಅವರು ರಾಜಕೀಯ ಪ್ರವೇಶಿಸುತ್ತಾರೆ, ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಪಕ್ಷದ ಮಹತ್ವದ ಹುದ್ದೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಅವರು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಇರುವ ಹುದ್ದೆ ಪಡೆದಿದ್ದಾರೆ.
ಇದನ್ನೂ ಓದಿ: Delhi services bill : ಆಪ್ಗೆ ತೀವ್ರ ಹಿನ್ನಡೆ, ಮೋದಿ ಸರ್ಕಾರದ ಪರ ನಿಂತ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ
ಯಾರಿವರು ಪಾಂಡಿಯನ್?
ಒಡಿಶಾ ಕೇಡರ್‌ನ 2000ನೇ ಇಸವಿ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ವಿ.ಕೆ. ಪಾಂಡಿಯನ್ ಅವರು 2002ರಲ್ಲಿ ಧರ್ಮಾಗಢದ ಸಬ್ ಕಲೆಕ್ಟರ್ ಆಗಿದ್ದರು. ಗಂಜಮ್ ಜಿಲ್ಲಾಧಿಕಾರಿಯಾಗಿ ಪದೋನ್ನತಿ ಪಡೆದ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನೆಚ್ಚಿನ ಅಧಿಕಾರಿ ಎನಿಸಿಕೊಂಡರು. 2011ರಲ್ಲಿ ಮುಖ್ಯಮಂತ್ರಿ ಕಚೇರಿ ಪ್ರವೇಶಿಸಿದ ವಿ.ಕೆ.ಪಾಂಡಿಯನ್ ಅವರನ್ನು ಬಳಿಕ ನವೀನ್ ಪಟ್ನಾಯಕ್ ಅವರು ತಮ್ಮ ಖಾಸಗಿ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ವಿ.ಕೆ.ಪಾಂಡಿಯನ್ ಅವರ ಏಳಿಗೆ ಕುರಿತು ಬಿಜೆಡಿಯಲ್ಲಿಯೇ ಕೆಲ ನಾಯಕರಿಗೆ ಅಸಮಾಧಾನ ಇದೆ ಎನ್ನಲಾಗುತ್ತದೆ. ವಿ.ಕೆ. ಪಾಂಡಿಯನ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳೂ ಬಿಜೆಡಿ ನಾಯಕರಿಂದ ಕೇಳಿಬಂದಿವೆ.