ಪಟಿಯಾಲಾ: ಸುಪ್ರೀಂಕೋರ್ಟ್ ಆದೇಶದಂತೆ ಇಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) ಸ್ಥಳೀಯ ಪಟಿಯಾಲಾ ಕೋರ್ಟ್‌ಗೆ ಶರಣಾಗಬೇಕಿತ್ತು. ಆದರೆ ಸಿಧು, ತಮಗೆ ಶರಣಾಗಲು ಇನ್ನಷ್ಟು ಸಮಯ ಬೇಕು. ಆರೋಗ್ಯ ಸಮಸ್ಯೆಯಾಗಿದ್ದು ಒಂದಷ್ಟು ವೈದ್ಯಕೀಯ ತಪಾಸಣೆಗಳು ತುರ್ತಾಗಿ ಆಗಬೇಕಿದೆ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ, ಈ ಮನವಿ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಲೂ ಕೋರಿದ್ದಾರೆ. ನವಜೋತ್ ಸಿಂಗ್ ಸಿಧು ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮೂಲಕ ಸಲ್ಲಿಸಲಾದ ಮನವಿಗೆ ಪ್ರತಿಕಿಯಿಸಿದ ಸುಪ್ರೀಂಕೋರ್ಟ್, ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಎದುರು ಪ್ರಸ್ತಾಪಿಸಿ. ಸಿಜೆಐ ನೇತೃತ್ವದ ವಿಶೇಷ ಪೀಠ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದು ಹೇಳಿದೆ.
1988ರಲ್ಲಿ ನಡೆದಿದ್ದ ರಸ್ತೆ ಜಗಳ (Road Rage Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ನವಜೋತ್ ಸಿಂಗ್ ಸಿಧುರಿಗೆ ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಿನ್ನೆ (ಮೇ 19)ಸುಪ್ರೀಂಕೋರ್ಟ್ ಆದೇಶ ನೀಡಿದೆ. 1988ರ ಡಿಸೆಂಬರ್‌ನಲ್ಲಿ ಪಟಿಯಾಲಾದ ಪಾರ್ಕಿಂಗ್ ಸ್ಥಳವೊಂದರಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಅವರ ಸಹಚರ ರೂಪಿಂದರ್ ಸಿಂಗ್ ಸಂಧು ಸೇರಿ, ಹಿರಿಯ ನಾಗರಿಕ ಗುರ್ನಾಮ್ ಸಿಂಗ್‌ರಿಗೆ ಬೈದಿದ್ದಲ್ಲದೆ, ಅವರನ್ನು ಕಾರಿನಿಂದ ಕೆಳಗೆ ಇಳಿದು ತಲೆಗೆ ಹೊಡೆದಿದ್ದರು. ಅದಾದ ಕೆಲವು ದಿನಗಳಲ್ಲಿ ಗುರ್ನಾಮ್ ಸಿಂಗ್ ಮೃತಪಟ್ಟಿದ್ದರು. ಬಳಿಕ ಗುರ್ನಾಮ್ ಸಿಂಗ್ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ಸೆಷನ್ಸ್ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ, ಯಾವುದೇ ಸೂಕ್ತ ದಾಖಲೆಯಿಲ್ಲ ಎಂಬ ಕಾರಣಕ್ಕೆ ವಜಾಗೊಂಡಿತ್ತು. ನಂತರ ಕುಟುಂಬದವರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಇದೊಂದು ಶಿಕ್ಷಾರ್ಹ ನರಹತ್ಯೆ ಎಂದು ತೀರ್ಪುಕೊಟ್ಟಿದ್ದಲ್ಲದೆ, ಸಿಧುಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಒಂದೇ ವಾರದಲ್ಲಿ ಕಮಲ ಹಿಡಿದ ಸುನಿಲ್ ಜಾಖರ್
ಹೈಕೋರ್ಟ್ ತೀರ್ಪಿನ ವಿರುದ್ಧ ನವಜೋತ್ ಸಿಂಗ್ ಸಿಧು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2018ರಲ್ಲಿ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಗುರ್ನಾಮ್ ಸಿಂಗ್ ಮೃತಪಟ್ಟಿದ್ದು ಸಿಧು ನೀಡಿದ ಏಟಿನಿಂದಲೇ ಎಂಬುದಕ್ಕೆ ಸಾಕ್ಷಿಯಿಲ್ಲ ಎಂದು ಹೇಳಿ ಸಿಧು ವಿರುದ್ಧ ದಾಖಲಾಗಿದ್ದ ನರಹತ್ಯೆ ಕೇಸ್‌ನ್ನು ಖುಲಾಸೆಗೊಳಿಸಿತ್ತು. ಆದರೆ ಹಿರಿಯ ನಾಗರಿಕರ ಮೇಲೆ ಹಲ್ಲೆ ಮಾಡಿದ್ದು ತಪ್ಪು ಎಂದು ಹೇಳಿ, ಒಂದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಆದರೆ ಸುಪ್ರೀಂಕೋರ್ಟ್‌ನ ಈ ತೀರ್ಪು ತೃಪ್ತಿ ತಂದಿಲ್ಲವೆಂದು ಗುರ್ನಾಮ್ ಕುಟುಂಬ ಮತ್ತೆ ಸುಪ್ರೀಂಕೋರ್ಟ್‌ಗೇ ಮೇಲ್ಮನವಿ ಸಲ್ಲಿಸಿತ್ತು. ನಿನ್ನೆ ಅದರ ಆದೇಶ ಹೊರಬಿದ್ದಿದ್ದು, ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಅವರ ಸಹಚರ ರೂಪಿಂದರ್ ಸಿಂಗ್ ಸಂಧು ಈಗಾಗಲೇ ದೋಷಮುಕ್ತಗೊಂಡಿದ್ದಾರೆ.
ನಿನ್ನೆ ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಟ್ವೀಟ್ ಮಾಡಿದ್ದ ನವಜೋತ್ ಸಿಂಗ್ ಸಿಧು, ನಾನು ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇನೆ. ಕಾನೂನು ಪರಿಪಾಲನೆ ಮಾಡುತ್ತೇನೆ ಎಂದಿದ್ದರು.
ಇದನ್ನೂ ಓದಿ: Road Rage Case: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ