Site icon Vistara News

Navy Day| ಇಂದು ನೌಕಾಪಡೆ ದಿನ; ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯುತ್ತಿಲ್ಲ ಆಚರಣೆ

Navy Day celebrations in Visakhapatnam

ಪ್ರತಿವರ್ಷ ಡಿಸೆಂಬರ್​ 4ರಂದು ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ. 1971ರಲ್ಲಿ ಇಂಡೋ-ಪಾಕ್​ ಯುದ್ಧ ನಡೆದ ಸಂದರ್ಭದಲ್ಲಿ ಭಾರತೀಯ ಸೇನೆ ನಡೆಸಿದ ‘ಆಪರೇಶನ್​ ಟ್ರೈಡೆಂಟ್​’ ಸ್ಮರಣಾರ್ಥವಾಗಿ ಪ್ರತಿವರ್ಷ ಡಿ.4ರಂದು ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ. 1971ರ ಡಿಸೆಂಬರ್​ 4 ಮತ್ತು 5ರಂದು ಭಾರತೀಯ ನೌಕಾಪಡೆ ಈ ಆಪರೇಶನ್​ ಟ್ರೈಡೆಂಟ್​​ ಪ್ರಾರಂಭಿಸಿತ್ತು. ಕರಾಚಿ ಬಂದರಿನ ರಕ್ಷಣೆಗಾಗಿ ಪಾಕಿಸ್ತಾನ ನಿಯೋಜಿಸಿಟ್ಟಿದ್ದ ರಕ್ಷಣಾ ಹಡಗುಗಳನ್ನು ಭಾರತೀಯ ನೌಕಾಪಡೆ ಕ್ಷಿಪಣಿಗಳು ಧ್ವಂಸಗೊಳಿಸಿದ್ದವು. ಭಾರತೀಯ ನೌಕೆಗಳು ಯಾವುದೇ ಹಾನಿಗೂ ಒಳಗಾಗದೆ ಸುರಕ್ಷಿತವಾಗಿ ವಾಪಸ್​ ಬಂದಿದ್ದವು. ಅಂತಿಮವಾಗಿ ಜಯ ಭಾರತಕ್ಕೆ ಲಭಿಸಿತ್ತು. ಅಂದು ನೌಕಾಪಡೆ ನಡೆಸಿದ್ದ ಆಪರೇಶನ್​ ಟ್ರೈಡೆಂಟ್ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಭಾಗವಾಗಿದೆ. ಹಾಗಾಗಿಯೇ ಪ್ರತಿವರ್ಷವೂ ಡಿ.4ರಂದು ಅದನ್ನು ಸ್ಮರಿಸಲಾಗುತ್ತದೆ.

ಪ್ರತಿವರ್ಷವೂ ನೌಕಾಪಡೆ ದಿನವನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲೇ ಆಚರಣೆ ಮಾಡಲಾಗುತ್ತಿತ್ತು. ಇದರಲ್ಲಿ ರಾಷ್ಟ್ರಪತಿ ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಸಲ ಮೊದಲ ಬಾರಿಗೆ ಭಾರತೀಯ ನೌಕಾಪಡೆ ದಿನವನ್ನು ವಿಶಾಖಪಟ್ಟಣಂನಲ್ಲಿ ಆಚರಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ. ಭಾರತವೀಗ ಸ್ವಾತಂತ್ರ್ಯ ಬಂದು 75ನೇ ವರ್ಷದ ‘ಅಮೃತ ಕಾಲ’ದಲ್ಲಿದೆ. ಈ ಹೊತ್ತಲ್ಲಿ ಭಾರತೀಯ ನೌಕಾಪಡೆ ತನ್ನ ಯುದ್ಧ ಸಾಮರ್ಥ್ಯವನ್ನು ದೇಶಕ್ಕೆ ಪರಿಚಯ ಮಾಡಿಕೊಡಲು ನಿರ್ಧಾರ ಮಾಡಿದೆ. ಇಂದು ನೌಕಾಪಡೆ ದಿನದ ನಿಮಿತ್ತ ವಿಶಾಖಪಟ್ಟಣಂನಲ್ಲಿ ‘ಆಪರೇಶನಲ್​ ಡೆಮಾನ್​ ಸ್ಟ್ರೇಶನ್​’ ಮೂಲಕ ಯುದ್ಧ ಪಟ್ಟುಗಳ ಪ್ರದರ್ಶನ ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶುಭ ಕೋರಿದ ಪ್ರಧಾನಿ ಮೋದಿ
ಇಂದು ನೌಕಾಪಡೆ ದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಶುಭಕೋರಿದ್ದಾರೆ. ನೌಕಾದಳಕ್ಕೆ ಸಂಬಂಧಪಟ್ಟ ವಿಡಿಯೊವೊಂದನ್ನು ಶೇರ್​ ಮಾಡಿಕೊಂಡು ಧ್ವನಿ ಸಂದೇಶವನ್ನೂ ಕೊಟ್ಟಿದ್ದಾರೆ. ‘ನೌಕಾ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ನೌಕಾಪಡೆ ದಿನದ ಹಾರ್ದಿಕ ಶುಭಾಶಯಗಳು. ಭಾರತೀಯ ನೌಕಾಪಡೆ ಭಾರತದ ರಕ್ಷಣೆಗಾಗಿ ಸದೃಢವಾಗಿ ನಿಂತಿದೆ. ದೇಶದೊಳಗೆ ಪ್ರಾಕೃತಿಕ ವಿಪತ್ತು, ಮತ್ತಿತರ ಸವಾಲುಗಳು ಎದುರಾದಾಗ ಮಾನವಿಯತೆಯೊಂದಿಗೆ ಅದನ್ನು ಎದುರಿಸಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಪಾದಕೀಯ: ನೌಕಾಪಡೆಗೆ ಮಹಿಳಾ ಬಲ, ಅಗ್ನಿವೀರರ ಸೇರ್ಪಡೆ

Exit mobile version