ದಂತೇವಾಡ: ಛತ್ತೀಸ್ಗಢ್ನಲ್ಲಿ ನಕ್ಸಲರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ದಂತೇವಾಡ ಜಿಲ್ಲೆಯ ಅರನ್‌ಪುರ ಎಂಬಲ್ಲಿ ಛತ್ತೀಸ್ಗಢ ಜಿಲ್ಲಾ ಮೀಸಲು ಪಡೆ (DRG) ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದ ವಾಹನವನ್ನು ಗುರಿಯಾಗಿಸಿ ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಅಳವಡಿಸಿ ಸ್ಫೋಟಿಸಿ (Naxal Attack) 11 ಯೋಧರ ಪ್ರಾಣ ತೆಗೆದಿದ್ದಾರೆ.
ಅರನ್‌ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್ಗಢ್ ಜಿಲ್ಲಾ ಮೀಸಲು ಪಡೆ ಸೈನಿಕರು ಅಲ್ಲಿಗೆ ತೆರಳುತ್ತಿದ್ದರು. ಅರಾನ್ಪುರದಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದರು. ಅಲ್ಲಿ ಕಾರ್ಯಾಚರಣೆ ಮುಗಿಸಿ ವಾಪಸ್ ಬರುವಾಗ ಈ ದುರ್ಘಟನೆ ನಡೆದೆ. ಅತ್ತ ಅರಾನ್ಪುರ ಕಾಡು ಪ್ರದೇಶದಲ್ಲಿ ಸೈನಿಕರು ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗಲೇ, ಇತ್ತು ಅವರ ವಾಹನ ವಾಪಸ್ ಬರುವ ದಾರಿಯಲ್ಲಿ ಮಾವೋವಾದಿಗಳು ಐಇಡಿ ಅಳವಡಿಸಿ ಇಟ್ಟಿದ್ದರು. ಡಿಆರ್ಜಿ ವಾಹನ ಆ ಐಇಡಿ ಇದ್ದ ಸ್ಥಳಕ್ಕೆ ಬರುತ್ತಿದ್ದಂತೆ ಅದು ಸ್ಪೋಟಗೊಂಡಿದೆ. ವಾಹನ ಚೂರುಚೂರಾಗಿದ್ದು, ಸೈನಿಕರ ದೇಹ ಛಿದ್ರಗೊಂಡಿದೆ. ಇಂದು ಮೃತಪಟ್ಟಿದ್ದು ಡಿಆರ್ಜಿಯ ವಿಶೇಷ ತಂಡ. ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಸೈನಿಕರೇ ಹೆಚ್ಚಿನ ಜನರು ಇದರಲ್ಲಿ ಇದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಛತ್ತೀಸ್ಗಢ್ನ ಸುಕ್ಮಾದಲ್ಲಿ ಮೂವರು ಪೊಲೀಸರನ್ನು ಹತ್ಯೆಗೈದ ನಕ್ಸಲರು; ಹೊಂಚು ಹಾಕಿ ದಾಳಿ ಮಾಡಿದ ದುಷ್ಟರು
ಘಟನೆಯ ಬೆನ್ನಲ್ಲೇ ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಟ್ವೀಟ್ ಮಾಡಿ, ‘ನಕ್ಸಲರ ದಾಳಿಯಲ್ಲಿ ಯೋಧರು ಮೃತಪಟ್ಟಿದ್ದು ನೋವಿನ ಸಂಗತಿ. ಈ ಕೃತ್ಯದಲ್ಲಿ ಪಾಲುದಾರರಾದ ಯಾರನ್ನೂ ಬಿಡುವುದಿಲ್ಲ. ಮೃತ ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಪ್ರಾಪ್ತಿಯಾಗಲಿ. ನಕ್ಸಲರ ವಿರುದ್ಧದ ಕಾದಾಟ ಅಂತಿಮ ಹಂತಕ್ಕೆ ತಲುಪಿದೆ. ಯಾರನ್ನೂ ಖಂಡಿತ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್ಗಢ ಮುಖ್ಯಮಂತ್ರಿಗೆ ಕರೆ ಮಾಡಿ ಸಂಪೂರ್ಣ ವಿವರ ಪಡೆದಿದ್ದಾರೆ. ಈ ವಿಚಾರದಲ್ಲಿ ಛತ್ತೀಸ್ಗಢ ಸರ್ಕಾರಕ್ಕೆ ಕೇಂದ್ರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಹಾಗೇ, ಘಟನೆ ನಡೆದ ಬೆನ್ನಲ್ಲೇ ಛತ್ತೀಸ್ಗಢ ಐಜಿ ಸುಂದ್ರಾಜ್ ಅವರು ಉನ್ನತ ಅಧಿಕಾರಿಗಳ ಸಭೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.