ನವ ದೆಹಲಿ: ದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಕ್ಸಲಿಸಂ ಮತ್ತು ಅದರ ಎಲ್ಲ ಸ್ವರೂಪಗಳನ್ನೂ ಬೇರು ಸಹಿತ ಕಿತ್ತೊಗೆಯಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹರ್ಯಾಣದ ಸೂರಜ್ಕುಂಡ್ನಲ್ಲಿ ನಡೆದ ಚಿಂತನ ಶಿಬಿರದಲ್ಲಿ ವರ್ಚ್ಯುವಲ್ ಆಗಿ ಅವರು ಮಾತನಾಡಿದರು.
‘ಉಗ್ರತ್ವದ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತಾ ನೀತಿ ಪಾಲನೆ ಮಾಡುತ್ತಿದೆ. ಭಯೋತ್ಪಾದನೆಯನ್ನು ತಳಮಟ್ಟದಿಂದ ಕಿತ್ತೊಗೆಯಲು ಎಲ್ಲ ಸರ್ಕಾರಗಳೂ ಬದ್ಧವಾಗಿ ಕಾರ್ಯನಿರತವಾಗಿವೆ. ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವವರ ಜತೆ ನಾವೆಲ್ಲರೂ ಕೈಜೋಡಿಸಬೇಕು. ಅದೇ ರೀತಿ ಅರ್ಬನ್ ನಕ್ಸಲರು, ಮಾವೋವಾದಿಗಳವಿರುದ್ಧವೂ ನಮ್ಮ ಹೋರಾಟ ಗಟ್ಟಿಯಾಗಬೇಕು. ಅವರು ಗನ್ ಹಿಡಿದು ಬರುವ ನಕ್ಸಲರೇ ಆಗಿರಲಿ, ಪೆನ್ ಹಿಡಿದು ನಕ್ಸಲಿಸಂ ಮಾಡುತ್ತಿರುವವರೇ ಆಗಿರಲಿ-ಅವರನ್ನೆಲ್ಲ ಸಂಪೂರ್ಣ ಬಗ್ಗುಬಡಿಯುತ್ತೇವೆ. ನಕ್ಸಲ್ ನಿರ್ಮೂಲನಕ್ಕೆ ಕ್ರಮ ಆಗಲೇಬೇಕು’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ನಕ್ಸಲೀಯರು, ಮಾವೋವಾದಿಗಳು ಈ ದೇಶದ ಯುವಜನರ ಮನಸಿನಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಇಲ್ಲ-ಸಲ್ಲದ ವಿಷಯವನ್ನು ಅವರ ತಲೆಗೆ ತುಂಬಿ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಈ ಮೂಲಕ ತಮ್ಮ ಬೌದ್ಧಿಕ ಕ್ಷೇತ್ರವನ್ನೂ ವಿಸ್ತರಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಮುಂದೆ ಇಂಥದ್ದೆಲ್ಲ ನಡೆಯಲು ನಾವು ಅವಕಾಶ ಮಾಡಿಕೊಡಬಾರದು. ವಿದೇಶಿ ದೇಣಿಗೆ ಪಡೆದು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಹಾಳುಮಾಡುತ್ತಿರುವ ಇಂಥ ದುಷ್ಟಶಕ್ತಿಗಳು ಪ್ರವರ್ಧಮಾನಕ್ಕೆ ಬರಲು ಬಿಡಬಾರದು. ಅವರನ್ನು ಹತ್ತಿಕ್ಕಲು ಸರ್ದಾರ್ ವಲ್ಲಭಬಾಯಿ ಪಟೇಲ್ರ ತತ್ವಗಳು ನಮಗೆ ಪ್ರೇರಣೆಯಾಗಬೇಕು’ ಎಂದೂ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಪ್ರಧಾನಿ ‘ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳು, ಪ್ರದೇಶಗಳ ಸಂಖ್ಯೆ ಕಳೆದ ಎಂಟು ವರ್ಷಗಳಲ್ಲಿ ಇಳಿಮುಖವಾಗಿದೆ. ನಕ್ಸಲಿಸಂ ವಿರುದ್ಧ ಹೋರಾಟವೂ ಮುಂದುವರಿದಿದೆ. ಜಮ್ಮು-ಕಾಶ್ಮೀರವೇ ಆಗಿರಲಿ, ಈಶಾನ್ಯ ಭಾಗವೇ ಆಗಿರಲಿ, ಎಲ್ಲ ಕಡೆಗಳಲ್ಲೂ ಶಾಂತಿ ಸ್ಥಾಪನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಭ್ರಷ್ಟಾಚಾರ, ಭಯೋತ್ಪಾದನೆ, ಹಣ ಅಕ್ರಮ ವರ್ಗಾವಣೆ ವಿರುದ್ಧ ಸಮರವನ್ನೇ ಸಾರಿದೆ. ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಗಳನ್ನೆಲ್ಲ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
ಅಪರಾಧಕ್ಕಿಂತಲೂ 10 ಹೆಜ್ಜೆ ಮುಂದಿರೋಣ !
ಇದೇ ಹೊತ್ತಲ್ಲಿ ಪ್ರಧಾನಿ ಮೋದಿ ಅಪರಾಧ ತಡೆ, ಕಾನೂನು ಸುವ್ಯವಸ್ಥೆ, ಸೈಬರ್ ಕ್ರೈಂ ನಿಯಂತ್ರಣದ ಬಗ್ಗೆಯೂ ಮಾತನಾಡಿದರು. ಸೈಬರ್ಕ್ರೈಂ ತಡೆಗೆ ಟೆಕ್ನಾಲಜಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ, ಶಸ್ತ್ರಾಸ್ತ್ರ, ಮಾದಕ ದ್ರವ್ಯ ಸಾಗಣೆ ವಿರುದ್ಧ ಹೋರಾಟದಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆಯ ಪ್ರಾಮುಖ್ಯತೆ ಬಗ್ಗೆಯೂ ನರೇಂದ್ರ ಮೋದಿ ಇಂದು ಮಾತನಾಡಿದ್ದಾರೆ. ಹಾಗೇ, ಈ ದಿನಗಳಲ್ಲಿ ಅಪರಾಧದ ಸ್ವರೂಪ ಬದಲಾಗುತ್ತಿದೆ. ಹೀಗಾಗಿ ಅದನ್ನು ತಡೆಯುವ ವಿಧಾನವನ್ನೂ ನಾವು ಚೇಂಜ್ ಮಾಡಿಕೊಳ್ಳಬೇಕು. ಈಗ ನಾವು 5ಜಿ ಯುಗಕ್ಕೆ ಪ್ರವೇಶಿಸಿದ್ದೇವೆ. ಅಪರಾಧಗಳಿಗಿಂತಲೂ ಹತ್ತು ಹೆಜ್ಜೆ ಮುಂದಿಟ್ಟು, ಅವುಗಳನ್ನು ತಡೆಯೋಣ’ ಎಂದು ಹೇಳಿದರು.
ಇದನ್ನೂ ಓದಿ: PM Modi | ಒಂದು ದೇಶ, ಒಂದು ಪೊಲೀಸ್ ಸಮವಸ್ತ್ರ ಪ್ರಸ್ತಾಪಿಸಿದ ಪ್ರಧಾನಿ ಮೋದಿ; ಚರ್ಚಿಸಲು ರಾಜ್ಯಗಳಿಗೆ ಸೂಚನೆ