ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ (Maharashtra Politics) ಮೈತ್ರಿ ಕಡಿದುಕೊಂಡು ಹೋಗಿ, ಕಾಂಗ್ರೆಸ್-ಎನ್ಸಿಪಿಯೊಟ್ಟಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆಗೆ ಯಾವ ಪರಿಸ್ಥಿತಿ ಉಂಟಾಗಿದೆಯೋ, ಅದೇ ಪರಿಸ್ಥಿತಿಯನ್ನೀಗ ಅಲ್ಲಿನ ಇನ್ನೊಂದು ಪ್ರಮುಖ ಪಕ್ಷ ಎನ್ಸಿಪಿ (NCP Crisis) ಅನುಭವಿಸುತ್ತಿದೆ. ಒಂದೂವರೆ ವರ್ಷದ ಹಿಂದೆ ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಬಣ, ಶಿಂಧೆ ಬಣ ಉಂಟಾಗಿತ್ತು. ಈ ಎರಡೂ ಬಣಗಳ ನಡುವಿನ ಕಾದಾಟ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಬಳಿಕ ಶಿಂಧೆ ಬಣದಲ್ಲಿ ಜಾಸ್ತಿ ಶಿವಸೈನಿಕರು ಇರುವ ಕಾರಣಕ್ಕೆ ಅದೇ ಬಣವೇ ನಿಜವಾದ ಶಿವಸೇನೆ ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತ್ತು.
ಅಂಥದ್ದೇ ಸಂದಿಗ್ಧ ಈಗ ಎನ್ಸಿಪಿಯಲ್ಲಿದೆ. ಎನ್ಸಿಪಿ ಪ್ರಮುಖ ನಾಯಕ ಅಜಿತ್ ಪವಾರ್ ಈಗ ಪಕ್ಷವನ್ನು ಒಡೆದಿದ್ದಾರೆ. ತನಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿರುವ ಅವರು ಬಿಜೆಪಿ-ಶಿವಸೇನೆ (ಶಿಂಧೆ ಬಣ)ದ ಮೈತ್ರಿ ಸೇರಿಕೊಂಡು, ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕಾರ ಮಾಡಿದ್ದಾರೆ. ಇಲ್ಲೀಗ ಅಜಿತ್ ಪವಾರ್ ಬಣ ಮತ್ತು ಸಂಸ್ಥಾಪಕ ಮುಖ್ಯಸ್ಥ ಶರದ್ ಪವಾರ್ ಬಣವೆಂಬ ಎರಡು ಗುಂಪು ಆಗಿದೆ. ಮತ್ತೀಗ ನಿಜವಾದ ಎನ್ಸಿಪಿ ಯಾವುದು ಎಂಬ ಕಿತ್ತಾಟ ಶುರುವಾಗಿದೆ. ಈ ಮಧ್ಯೆ ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣಗಳೆರಡೂ ಜುಲೈ 5ರಂದು ಪ್ರಮುಖವಾದ ಸಭೆಯೊಂದನ್ನು ನಡೆಸಲಿವೆ. ಈ ಮೂಲಕ ನಿಜವಾದ ಎನ್ಸಿಪಿ ಪಕ್ಷ ಎಂಬ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.
ಇದನ್ನೂ ಓದಿ: Maharastra Politics : ಅಜಿತ್ ಮಹಾ ಬಂಡಾಯ, ಶರದ್ ಪವಾರ್ ಈಗ ಪವರ್‌ಲೆಸ್?
ಈಗಾಗಲೇ ಎರಡೂ ಬಣಗಳಿಂದ ಪರಸ್ಪರ ಹಲವರು ರೆಬೆಲ್ ಸದಸ್ಯರನ್ನು ಕಿತ್ತುಹಾಕಲಾಗಿದೆ. ತಮಗೇ ಸಂಪೂರ್ಣ ಅಧಿಕಾರ ಇರುವುದು ಎಂದು ಅಜಿತ್ ಪವಾರ್ ಮತ್ತು ಶರದ್ ಪವಾರ್ ಇಬ್ಬರೂ ಪ್ರತಿಪಾದಿಸುತ್ತಿದ್ದಾರೆ. ಅಂದಹಾಗೇ, ಬುಧವಾರ ಮಧ್ಯಾಹ್ನ 1 ಗಂಟೆಗೆ ಎನ್ಸಿಪಿ ಶರದ್ ಪವಾರ್ ಬಣದ ಸಭೆ ಮತ್ತು ಬೆಳಗ್ಗೆ 11ಗಂಟೆಗೆ ಅಜಿತ್ ಪವಾರ್ ಸಭೆ ನಡೆಯಲಿದೆ. ಸದ್ಯಕ್ಕಂತೂ ಎರಡೂ ಬಣಗಳು ತಮಗೇ ಸಂಪೂರ್ಣ ಬೆಂಬಲ ಇರುವುದು ಎಂದು ಹೇಳಿಕೊಳ್ಳುತ್ತಿವೆ. ಅಜಿತ್ ಪವಾರ್ ಬಂಡಾಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ‘ಇಂಥ ಬಂಡಾಯಗಳು ಸಾಮಾನ್ಯ. ಆದರೆ ನಾನಿದಕ್ಕೆಲ್ಲ ಹೆದರುವುದಿಲ್ಲ. ಯಾರು ಎನ್ಸಿಪಿಯನ್ನು ಒಡೆದಿದ್ದಾರೋ ಅವರಿಗೆ ಅವರ ನಿಜವಾದ ಜಾಗ ತೋರಿಸುತ್ತೇನೆ. ನಾನು ನನ್ನ ಪಕ್ಷವನ್ನು ಮತ್ತೆ ಕಟ್ಟಿ ತೋರಿಸುತ್ತೇನೆ’ ಎಂದಿದ್ದಾರೆ.