ಮಹಾರಾಷ್ಟ್ರದಲ್ಲಿ ಎನ್ಸಿಪಿಯಲ್ಲಿ (NCP Crisis) ಒಡಕು ಮೂಡಿ, ಶರದ್ ಪವಾರ್ (Sharad Pawar) ಬಣ ಮತ್ತು ಅಜಿತ್ ಪವಾರ್ (Ajit Pawar) ಬಣವಾಗಿ ಇಬ್ಭಾಗವಾಗಿದೆ. ಯಾರ ಬಣಕ್ಕೆ ಎಷ್ಟು ಶಾಸಕರು/ಸಂಸದರ ಬಲ ಎಂಬುದನ್ನು ನಿರ್ಧರಿಸುವ ಸಭೆಗಳು ಇಂದು ನಡೆದಿದ್ದವು. ಅದರಲ್ಲೀಗ ಅಜಿತ್ ಪವಾರ್ ಬಣ ನಡೆಸಿದ ಸಭೆಯಲ್ಲಿ ಎನ್ಸಿಪಿಯ 53 ಶಾಸಕರಲ್ಲಿ 29 ಶಾಸಕರು, ನಾಲ್ವರು ಎಂಎಲ್ಸಿಗಳು ಪಾಲ್ಗೊಂಡಿದ್ದರು. ಹಾಗೇ, ಶರದ್ ಪವಾರ್ ನೇತೃತ್ವದ ಸಭೆಯಲ್ಲಿ 13 ಶಾಸಕರಷ್ಟೇ ಪಾಲ್ಗೊಂಡಿದ್ದರು. ಈ ಎರಡೂ ಬಣಗಳ ಪ್ರತ್ಯೇಕ ಸಭೆ ನಡೆದಿತ್ತು. ಹಾಗೇ, ಎಲ್ಲ ಶಾಸಕ/ಸಂಸದರೂ ಹಾಜರಿರಬೇಕು ಎಂದು ವಿಪ್ ಕೂಡ ಹೊರಡಿಸಲಾಗಿತ್ತು. ಇಷ್ಟೆಲ್ಲ ಆದ ಮೇಲೆ ಅಜಿತ್ ಪವಾರ್ ಬಣದ ಬಲವೇ ಜಾಸ್ತಿ ಇರುವುದು ಕಾಣಿಸಿದೆ. ಆದರೂ ಅವರು ತನ್ನ ಬಣವೇ ಎನ್ಸಿಪಿ ಎಂದು ಹೇಳಿಕೊಂಡು, ಅನರ್ಹತೆಯಿಂದ ಪಾರಾಗಲು ಒಟ್ಟು 36 ಶಾಸಕರ ಅಗತ್ಯವಿದೆ.
ಅಜಿತ್ ಪವಾರ್ ಸಭೆ ಪೋಸ್ಟರ್ನಲ್ಲಿ ಶರದ್ ಪವಾರ್ ಫೋಟೋ!
ಮಹಾರಾಷ್ಟ್ರದಲ್ಲಿ ಎನ್ಸಿಪಿ ಪಕ್ಷ ಒಡೆದು ಇಬ್ಭಾಗವಾಗಿ, ಎರಡು ಸಭೆಗಳು ನಡೆದಿವೆ. ಅಚ್ಚರಿಯೆಂದರೆ ಅಜಿತ್ ಪವಾರ್ ನಡೆಸಿದ ಸಭೆಯ ವೇದಿಕೆ ಮೇಲೆ ಹಾಕಲಾಗಿದ್ದ ಪೋಸ್ಟರ್ನಲ್ಲಿ ಶರದ್ ಪವಾರ್ ಫೋಟೋ ಕೂಡ ಇತ್ತು. ಶರದ್ ಪವಾರ್ ಅವರ ಹಳೇ ಕಾಲದ ಫೋಟೋ ಇದಾಗಿತ್ತು. ವೇದಿಕೆ ಮೇಲೆ ಹಾಕಲಾಗಿದ್ದ ಪೋಸ್ಟರ್ನಲ್ಲಿ ಅಜಿತ್ ಪವಾರ್, ಪ್ರಫುಲ್ ಪಟೇಲ್ ಮತ್ತು ಇನ್ನಿತರ ನಾಯಕರ ಫೋಟೋವಿದೆ. ಈ ಸಭೆಯಲ್ಲಿ ತಮ್ಮ ಫೋಟೋ ಬಳಸಿಕೊಳ್ಳುವುದು ಶರದ್ ಪವಾರ್‌ಗೆ ಇಷ್ಟವಿರಲಿಲ್ಲ. ಅವರು ಅನುಮತಿ ಕೂಡ ಕೊಟ್ಟಿರಲಿಲ್ಲ. ಆದರೂ ಅಜಿತ್ ಪವಾರ್ ಕೇರ್ ಮಾಡಲಿಲ್ಲ. ಅವರ ಸಭೆಯ ಪೋಸ್ಟರ್ ಮೇಲೆ ಶರದ್ ಪವಾರ್ ಫೋಟೋ ದೊಡ್ಡದಾಗಿ ರಾರಾಜಿಸುತ್ತಿತ್ತು.
ಇದನ್ನೂ ಓದಿ: Maharashtra Politics: ಅಜಿತ್ ಪವಾರ್‌ಗೆ ತೀವ್ರ ಹಿನ್ನಡೆ; ಶರದ್ ಪವಾರ್ ಬಣಕ್ಕೆ ಮರಳಿದ ಶಾಸಕ ಅಶೋಕ್
ಶರದ್ ಪವಾರ್ ಬಣದ ಸಭೆ ದಕ್ಷಿಣ ಮುಂಬಯಿಯ ವೈ.ಬಿ.ಚವ್ಹಾಣ್ ಸೆಂಟರ್ನಲ್ಲಿ ಮಧ್ಯಾಹ್ನ 1ಗಂಟೆಗೆ ನಡೆದಿದೆ. ಹಾಗೇ, ಅಜಿತ್ ಪವಾರ್ ನೇತೃತ್ವದ ಸಭೆ ಬಾಂದ್ರಾ ಸಬ್ಅರ್ಬನ್ನಲ್ಲಿರುವ ಮುಂಬಯಿ ಶೈಕ್ಷಣಿಕ ಸಂಸ್ಥೆ (MET)ಆವರಣದಲ್ಲಿ ಮಧ್ಯಾಹ್ನ 11ಗಂಟೆಗೆ ನಡೆದಿತ್ತು. ಇಂದಿನ ಸಭೆಯಲ್ಲಿ ಯಾವುದೂ ಅಂತ್ಯವಾಗಿಲ್ಲ. ಎರಡೂ ಬಣಕ್ಕೆ ಸ್ಪಷ್ಟವಾಗಿ ಎಷ್ಟೆಷ್ಟು ಶಾಸಕರ ಬೆಂಬಲವಿದೆ ಎಂಬುದು ಅಂತಿಮವಾಗಿಲ್ಲ.