ಮುಂಬಯಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ-NCP)ವೀಗ ಎರಡು ಭಾಗವಾಗಿದೆ. ಅಲ್ಲೀಗ ಎರಡು ಪವರ್ (ಪವಾರ್)ಫುಲ್ ಬಣಗಳಾಗಿವೆ. ಒಂದು ಬಣಕ್ಕೆ ಶರದ್ ಪವಾರ್ (Sharad Pawar) ಮುಖ್ಯಸ್ಥ, ಇನ್ನೊಂದು ಬಣಕ್ಕೆ ಅಜಿತ್ ಪವಾರ್ ಚೀಫ್ (Ajit Pawar). ಈ ಎರಡೂ ಬಣಗಳಲ್ಲಿ ನಿಜವಾದ ಎನ್ಸಿಪಿ ಯಾವುದು? ಎಂಬುದು ಪ್ರಶ್ನೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಶಿಂಧೆ ಬಣದ ಮೈತ್ರಿ ಸರ್ಕಾರ ಸೇರಿ, ಉಪಮುಖ್ಯಮಂತ್ರಿಯಾದ ಅಜಿತ್ ಪವಾರ್ ತನಗೆ ಎನ್ಸಿಪಿಯ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಪಕ್ಷವನ್ನು ಸಂಸ್ಥಾಪಿಸಿದ ಶರದ್ ಪವಾರ್ ಸುಲಭಕ್ಕಂತೂ ತಮ್ಮ ಹೋರಾಟ ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ಇಂದು ಎರಡೂ ಬಣಗಳು ಪ್ರಮುಖ ಸಭೆ ನಡೆಸಲಿವೆ.
ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣಗಳು ಎರಡೂ ತಮ್ಮತಮ್ಮ ಗುಂಪಿಗೆ ಮುಖ್ಯ ಸಚೇತಕರನ್ನು ನೇಮಿಸಿಕೊಂಡಿದ್ದಾರ. ಹಾಗೇ, ಈ ಎರಡೂ ಸಭೆಗಳಲ್ಲಿ ಪಕ್ಷದ ಎಲ್ಲ ಶಾಸಕರು, ಸಂಸದರು, ಪದಾಧಿಕಾರಿಗಳು ಹಾಜರಿರಲೇಬೇಕು ಎಂದು ಎರಡೂ ಬಣಗಳಿಂದಲೂ ವಿಪ್ ಜಾರಿ ಮಾಡಲಾಗಿದೆ. ಶರದ್ ಪವಾರ್ ಬಣದ ಸಭೆ ದಕ್ಷಿಣ ಮುಂಬಯಿಯ ವೈ.ಬಿ.ಚವ್ಹಾಣ್ ಸೆಂಟರ್ನಲ್ಲಿ ಮಧ್ಯಾಹ್ನ 1ಗಂಟೆಗೆ ನಡೆಯಲಿದೆ. ಹಾಗೇ, ಅಜಿತ್ ಪವಾರ್ ನೇತೃತ್ವದ ಸಭೆ ಬಾಂದ್ರಾ ಸಬ್ಅರ್ಬನ್ನಲ್ಲಿರುವ ಮುಂಬಯಿ ಶೈಕ್ಷಣಿಕ ಸಂಸ್ಥೆ (MET)ಆವರಣದಲ್ಲಿ ಮಧ್ಯಾಹ್ನ 11ಗಂಟೆಗೆ ನಡೆಯಲಿದೆ. ಎರಡೂ ಸಭೆಗಳ ಸಮಯ ಬೇರೆ ಇದ್ದುದರಿಂದ ಎಲ್ಲ ಶಾಸಕರು, ಸಂಸದರು/ಪದಾಧಿಕಾರಿಗಳಿಗೆ ಹಾಜರಾಗಲು ಅನುಕೂಲಕರವಾಗಿಯೇ ಇದೆ.
ಇದನ್ನೂ ಓದಿ: NCP Crisis: ಶಿವಸೇನೆ ಪರಿಸ್ಥಿತಿಯೇ ಬಂತು; ನಿಜವಾದ ಎನ್ಸಿಪಿ ಯಾವುದು?-ನಾಳೆಯೇ ಪವರ್ಫುಲ್ ಸಭೆ
ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣಗಳೆರಡೂ ಎನ್ಸಿಪಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ. ನಮ್ಮ ಬಣವೇ ನಿಜವಾದ ಎನ್ಸಿಪಿ ಎಂದು ಸಾಬೀತುಪಡಿಸುವ ಸವಾಲು ಅವರ ಮುಂದೆ ಇದೆ. ತಮಗೇ ಹೆಚ್ಚಿನ ಸದಸ್ಯರ ಬೆಂಬಲವಿದೆ ಎಂದು ಶರದ್ ಮತ್ತು ಅಜಿತ್ ಇಬ್ಬರೂ ಹೇಳಿಕೊಳ್ಳುತ್ತಿದ್ದಾರೆ. ಇಂದಿನ ಎರಡೂ ಸಭೆಯಲ್ಲಿ ಎರಡೂ ಬಣಗಳು ತಮ್ಮೆಡೆಗೆ ಹೆಚ್ಚಿನ ಶಾಸಕರು/ಸಂಸದರನ್ನು ಸೆಳೆಯುವ ಪ್ರಯತ್ನವನ್ನು ಮಾಡಲಿವೆ. ಇದೀಗ ಪಕ್ಷದಿಂದ ಎದ್ದು ಹೋದ ಅಜಿತ್ ಪವಾರ್ ಬಣ ಅನರ್ಹತೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಕನಿಷ್ಠ 36 ಶಾಸಕರ ಬೆಂಬಲವಾದರೂ ಬೇಕು. ಇಂದಿನ ಸಭೆಗೂ ಪೂರ್ವ ಅಜಿತ್ ಪವಾರ್ ಮತ್ತು ಶರದ್ ಪವಾರ್ ಇಬ್ಬರೂ ತಾವೇ ಸ್ವತಃ ಬಹುತೇಕ ಶಾಸಕರು, ಸಂಸದರು, ಪದಾಧಿಕಾರಿಗಳಿಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದಾರೆ.