Site icon Vistara News

Ajit Pawar: ಒಡೆಯಿತು ಎನ್​ಸಿಪಿ; ಶಿಂದೆ ಸರ್ಕಾರ ಸೇರಿದ ಅಜಿತ್ ಪವಾರ್ ‘ಮಹಾ’ ಉಪಮುಖ್ಯಮಂತ್ರಿ!

Ajit Pawar

ನ್ಯಾಶನಲಿಸ್ಟ್​ ಕಾಂಗ್ರೆಸ್ ಪಾರ್ಟಿ (NCP) ಒಡಕಾಗಿದ್ದು, ಅಲ್ಲೀಗ ಅಜಿತ್ ಪವಾರ್ (Ajit Pawar) ಎದ್ದು ಹೊರನಡೆದಿದ್ದಾರೆ. ಪಕ್ಷದಿಂದ ಒಂದು ಕಾಲು ಹೊರಗಿಟ್ಟಂತೆ ವರ್ತಿಸುತ್ತಿದ್ದ ಎನ್​ಸಿಪಿ ನಾಯಕ, ಶರದ್​ ಪವಾರ್ ಅವರ ಸೋದರಳಿಯ ಅಜಿತ್ ಪವಾರ್​ ತನ್ನ ಬೆಂಬಲಿಗರಾದ 17 ಶಾಸಕರೊಟ್ಟಿಗೆ ಹೋಗಿ ಮಹಾರಾಷ್ಟ್ರದ ಏಕನಾಥ ಶಿಂಧೆ ಸರ್ಕಾರವನ್ನು ಸೇರಿಕೊಂಡು, ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ (Maharashtra DCM) ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅಜಿತ್ ಪವಾರ್ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಉಪಸ್ಥಿತರಿದ್ದರು.

2019ರ ಅಕ್ಟೋಬರ್​ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದು, ಫಲಿತಾಂಶ ಬರುತ್ತಿದ್ದಂತೆ ಅಲ್ಲಿ ಶಿವಸೇನೆ-ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡಲು ಪ್ಲ್ಯಾನ್ ಮಾಡುತ್ತಿದ್ದರು. ಆದರೆ ಆಗಲೇ ಒಮ್ಮೆ ಅಜಿತ್ ಪವಾರ್ ಮೌನವಾಗಿ ಹೊರಬಿದ್ದು ಹೋಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ರಾತ್ರಿ ಬೆಳಗಾಗುವ ಒಳಗೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಮತ್ತು ಅಷ್ಟೇ ಬೇಗ ಆ ಮೈತ್ರಿ ಮುರಿದು ವಾಪಸ್​ ಎನ್​ಸಿಪಿಗೆ ಬಂದಿದ್ದರು. ಆದರೆ ಈ ಬಾರಿ ಮತ್ತೆ ಎನ್​ಸಿಪಿ ಬಿಟ್ಟು ಹೋಗಿದ್ದಾರೆ. ಮಹಾರಾಷ್ಟ್ರದ ಶಿಂದೆ ಬಣ-ಬಿಜೆಪಿಯ ಮೈತ್ರಿ ಸೇರಿಕೊಂಡು, ಉಪಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ: Maha political crisis| ಅಜಿತ್‌ಪವಾರ್‌ ಡೀಲ್‌ ಮಾದರಿಯಲ್ಲಿ ಶಿಂಧೆಗೆ ಬಿಜೆಪಿಯಿಂದ ಡಿಸಿಎಂ ಆಫರ್?

ಇತ್ತೀಚೆಗೆ ಶರದ್​ ಪವಾರ್ ಒಮ್ಮೆ ಪಕ್ಷದ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಕ್ಕೆ ಕಾರಣ ಇದೇ ಅಜಿತ್ ಪವಾರ್ ಎನ್ನಲಾಗಿತ್ತು. ಆದರೆ ಪಾರ್ಟಿಯಲ್ಲಿ ಯಾರಿಗೂ ಶರದ್ ಪವಾರ್ ಬಿಡುವುದು ಬೇಕಿರಲಿಲ್ಲ. ಹೀಗಾಗಿ ಅವರ್ಯಾರೂ ಒಪ್ಪದ ಕಾರಣ ಮತ್ತೆ ಶರದ್ ಪವಾರ್​ ತಮ್ಮ ಸ್ಥಾನದಲ್ಲಿ ಮುಂದುವರಿದಿದ್ದರು. ಇತ್ತೀಚೆಗೆ ಎನ್​ಸಿಪಿಯ ಕಾರ್ಯಾಧ್ಯಕ್ಷರ ನೇಮಕ ನಡೆದಿತ್ತು. ಆಗಲೂ ಅಜಿತ್ ಪವಾರ್ ಅವರನ್ನು ಪರಿಗಣಿಸಲಾಗಿರಲಿಲ್ಲ. ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿದ್ದ ಅಜಿತ್ ಪವಾರ್​ ಅವಕಾಶ ಸಿಕ್ಕಾಗಲೆಲ್ಲ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನನಗೆ ಪ್ರತಿಪಕ್ಷ ನಾಯಕನ ಹುದ್ದೆ ಬೇಡ, ಪಕ್ಷದೊಳಗೆ ಯಾವುದಾದರು ಸಂಘಟನಾತ್ಮಕ ಸ್ಥಾನ ಕೊಡಿ ಎಂದು ಎರಡು-ಮೂರು ಬಾರಿ ಕೇಳಿದ್ದರು. ಇತ್ತೀಚೆಗೆ ದೆಹಲಿಯಲ್ಲಿ ಎನ್​ಸಿಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿತ್ತು. ಅದರ ಪೋಸ್ಟರ್​ನಲ್ಲಿ ಕೂಡ ಅಜಿತ್ ಪವಾರ್​ ಫೋಟೋ ಮಾಯವಾಗಿತ್ತು. ಎನ್​ಸಿಪಿ ಒಡಕಿನ ಹೊಗೆಯ ಬೆಂಕಿ ಈಗ ಸ್ಪಷ್ಟವಾಗಿ ಹೊತ್ತಿಕೊಂಡಿದೆ. ಈಗಾಗಲೇ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್ ಜತೆ ಅಜಿತ್ ಪವಾರ್ ಕೂಡ ಉಪಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.

Exit mobile version