ಒಡಿಶಾದ ಬಾಲಾಸೋರ್ ಮೂರು ರೈಲುಗಳು ಅಪಘಾತಕ್ಕೀಡಾಗಿ (Odisha Train Accident), ಹಲವು ಬೋಗಿಗಳು ಕಳಚಿ ಬಿದ್ದು, ಪ್ರಯಾಣಿಕರೆಲ್ಲ ನರಳುತ್ತಿದ್ದಾಗ ಯಾರೇನು ಮಾಡಬೇಕು? ಯಾರಿಗೆ ಹೇಳಬೇಕು? ಎಂಬಿತ್ಯಾದಿ ಧಾವಂತ ಅಲ್ಲಿತ್ತು. ಕೂಗಾಟ-ನರಳಾಟ, ರೈಲಿನ ಅವಶೇಷಗಳಡಿ ಸಿಲುಕಿದವರ ಆಕ್ರಂದನದ ಸನ್ನಿವೇಶ ಸೃಷ್ಟಿಯಾಗಿತ್ತು. ಇದೆಲ್ಲದರ ಮಧ್ಯೆ ತುರ್ತು ಸೇವೆಗಳಿಗೆ ತಕ್ಷಣ ವಿಷಯ ಮುಟ್ಟಿಸಿ, ರೈಲು ದುರಂತದ ವಿಷಯ ತಿಳಿಸಿದ್ದು ಒಬ್ಬರು ಎನ್ಡಿಆರ್ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ಯೋಧ.
ರೈಲು ದುರಂತದ ಬಗ್ಗೆ ರಕ್ಷಣಾ ಮತ್ತು ತುರ್ತು ಸೇವೆಗಳಿಗೆ ಮೊಟ್ಟಮೊದಲು ವಿಷಯ ಮುಟ್ಟಿಸಿ ಅಲರ್ಟ್ ಮಾಡಿದ್ದು, ಎನ್ಡಿಆರ್ಎಫ್ ಯೋಧ ಎನ್. ಕೆ.ವೆಂಕಟೇಶ್. ರಜೆಯಲ್ಲಿದ್ದ ಇವರು ಅಪಘಾತಕ್ಕೀಡಾದ ಕೋರಮಂಡಲ ಎಕ್ಸ್ಪ್ರೆಸ್ ರೈಲಿನಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಅಪಘಾತ ನಡೆದ ಜಾಗದ ಲೈವ್ ಲೊಕೇಶನ್ ಕೂಡ ಇವರು ತುರ್ತು ಸೇವೆಗಳ ವಿಭಾಗಕ್ಕೆ ಕಳಿಸಿಕೊಟ್ಟಿದ್ದರು. ನಂತರ ಕ್ವಿಕ್ ಆಗಿ ಅಲ್ಲಿಗೆ ಧಾವಿಸಿದ ರಕ್ಷಣಾ ಸಿಬ್ಬಂದಿಯೊಂದಿಗೆ ಸೇರಿ ತಾವೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಬಾಲಾಸೋರ್ ಬಳಿ ಬಹನಾಗಾ ಎಂಬಲ್ಲಿ ಮೂರು ರೈಲುಗಳ ಮಧ್ಯೆ ಭೀಕರ ಅಪಘಾತವಾಗಿ 288 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಅಂದು ಲೂಪ್ ಹಳಿಯ ಮೇಲೆ ಸರಕು ರೈಲು ನಿಂತಿತ್ತು. ಅದೇ ಮಾರ್ಗವಾಗಿ ಸಾಗುತ್ತಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್ಪ್ರೆಸ್ ರೈಲು ತಪ್ಪಾದ ಮಾರ್ಗದಲ್ಲಿ ಸಂಚರಿಸಿ, ಆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಎರಡೂ ರೈಲುಗಳ ಬೋಗಿಗಳು ಕಳಚಿ, ಉರುಳಿ ಪಕ್ಕದ ಹಳಿಗೆ ಬಿದ್ದವು. ಅದೇ ಸಂದರ್ಭದಲ್ಲಿ ಆ ಹಳಿಯ ಮೇಲೆ ಬೆಂಗಳೂರು-ಹೌರಾ ಸೂಪರ್ಪಾಸ್ಟ್ ರೈಲು ವೇಗವಾಗಿ ಸಾಗುತ್ತಿತ್ತು. ಈಚೆ ಹಳಿಯಲ್ಲಿ ಅಪಘಾತಕ್ಕೀಡಾದ ರೈಲುಗಳ ಬೋಗಿಗಳು ಬೆಂಗಳೂರು-ಹೌರಾ ರೈಲಿಗೆ ಬಲವಾಗಿ ಡಿಕ್ಕಿ ಹೊಡದು, ಅದರ ಮೂರ್ನಾಲ್ಕು ಬೋಗಿಗಳೂ ಕಳಚಿ ಬಿದ್ದಿವೆ. ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲೇ ಭಯಾನಕವಾದ ಅಪಘಾತ ಇದಾಗಿದೆ. 1100 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಎನ್ಡಿಆರ್ಎಫ್ ಯೋಧ ಎನ್.ಕೆ.ವೆಂಕಟೇಶ್ ಅವರು ಕರ್ತವ್ಯಕ್ಕೆ ರಜಾ ಹಾಕಿ, ಹೌರಾದಿಂದ ತಮಿಳುನಾಡಿಗೆ ಪ್ರಯಾಣ ಮಾಡುತ್ತಿದ್ದರು. ಇವರಿದ್ದ ಕೋಚ್ ಬಿ-7ಆಗಿತ್ತು. ಇದೊಂದು ಎಸಿ ಕೋಚ್ ಆಗಿದ್ದು, ಸೀಟ್ ನಂಬರ್ 58ರಲ್ಲಿ ಕುಳಿತಿದ್ದರು. ಅದೃಷ್ಟಕ್ಕೆ ಅಪಘಾತದಲ್ಲಿ ಇವರಿದ್ದ ಬೋಗಿ ಕಳಚಿ ಬಿದ್ದಿರಲಿಲ್ಲ. 39ವರ್ಷದ ಇವರು ಎನ್ಡಿಆರ್ಎಫ್ ಕೊಲ್ಕತ್ತ 2ನೇ ಬೆಟಾಲಿಯನ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೈಲು ಅಪಘಾತವಾಗುತ್ತಿದ್ದಂತೆ ಅದೆಷ್ಟ ಕ್ವಿಕ್ ಆಗಿ ಬುದ್ಧಿ ಓಡಿಸಿದ್ದಾರೆಂದರೆ, ತಕ್ಷಣವೇ ಮೊಬೈಲ್ನಿಂದ ಎನ್ಡಿಆರ್ಎಫ್ಗೆ ಕರೆ ಮಾಡಿದ್ದಾರೆ. ಬಳಿಕ ಅದರ ಕಂಟ್ರೋಲ್ ರೂಮ್ಗೆ ಅಪಘಾತವಾದ ಸ್ಥಳದ ಫೋಟೋ ಕಳಿಸಿದ್ದಾರೆ. ಲೈವ್ ಲೊಕೇಶನ್ ಕೂಡ ಹಾಕಿದ್ದಾರೆ. ಇವರ ಮಾಹಿತಿ ಪಡೆಯುತ್ತಿದ್ದಂತೆ ಎನ್ಡಿಆರ್ಎಫ್ನ ಮೊದಲ ತಂಡ ಕ್ಷಿಪ್ರವಾಗಿ ಓಡಿಬಂದಿದೆ. ಅಷ್ಟರಲ್ಲಿ ಸ್ಥಳೀಯರೂ ಅಲ್ಲಿಗೆ ಆಗಮಿಸಿ ತಮಗೆ ಎಷ್ಟಾಗತ್ತೋ ಅಷ್ಟು ಜನರನ್ನು ರಕ್ಷಿಸಿದ್ದಾರೆ.