ನವ ದೆಹಲಿ: ನ್ಯೂ ದೆಹಲಿ ಟೆಲಿವಿಷನ್ (ಎನ್ಡಿಟಿ) ಸಮೂಹದ ಅಧ್ಯಕ್ಷೆಯಾಗಿದ್ದ ಸುಪರ್ಣಾ ಸಿಂಗ್ ಅವರು ರಾಜೀನಾಮೆ ನೀಡಿದ 15 ದಿನಗಳಲ್ಲೇ ಆ ಮಾಧ್ಯಮದ ಇನ್ನೊಬ್ಬ ಹಿರಿಯ ಪತ್ರಕರ್ತ, ಕಳೆದ 30 ವರ್ಷಗಳಿಂದ ಎನ್ಡಿಟಿವಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ಸುದ್ದಿ ನಿರೂಪಕ ಶ್ರೀನಿವಾಸನ್ ಜೈನ್ ರಾಜೀನಾಮೆ ಕೊಟ್ಟಿದ್ದಾರೆ. ವಿವಾದಿತ ಆ್ಯಂಕರ್ ಎಂದೇ ಕುಖ್ಯಾತಿ ಪಡೆದಿರುವ ಶ್ರೀನಿವಾಸನ್ ಜೈನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಜೀನಾಮೆ ವಿಷಯ ಬಹಿರಂಗ ಪಡಿಸಿದ್ದಾರೆ. ‘ಎನ್ಡಿಟಿವಿಯಲ್ಲಿನ ಸುಮಾರು ಮೂರು ದಶಕಗಳ ಸುದೀರ್ಘವಾದ, ಅದ್ಭುತ ಪ್ರಯಾಣವನ್ನು ಇಂದು ಕೊನೆಗೊಳಿಸಿದ್ದೇನೆ. ರಾಜೀನಾಮೆ ನಿರ್ಧಾರ ಸುಲಭವಲ್ಲ. ಆದರೆ ರಾಜೀನಾಮೆ ಕೊಟ್ಟಿದ್ದೇನೆ. ಇನ್ನಷ್ಟು ಮಾಹಿತಿಗಳನ್ನು ನಂತರ ಹಂಚಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಎನ್‌ಡಿಟಿವಿಯ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಸಂಸ್ಥೆಯಲ್ಲಿನ ತಮ್ಮ 27.26% ಷೇರುಗಳನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡಿದ್ದರಿಂದ ಎನ್‌ಡಿಟಿಯ ಮಾಲೀಕತ್ವ ಹಾಗೂ ಪೂರ್ಣ ನಿಯಂತ್ರಣ ಅದಾನಿ ಗ್ರೂಫ್ ಪಾಲಾಗಿದೆ. ಅದರ ಬೆನ್ನಲ್ಲೇ ಅಲ್ಲಿ ಕೆಲಸ ಮಾಡುತ್ತಿದ್ದ ಹಲವು ಹಿರಿಯ ಪತ್ರಕರ್ತರು ರಾಜೀನಾಮೆ ನೀಡುತ್ತಿದ್ದಾರೆ. ಹಿರಿಯ ಕಾರ್ಯನಿರ್ವಹಣಾ ಸಂಪಾದಕ ರವೀಶ್ ಕುಮಾರ್ ಕಳೆದ ಡಿಸೆಂಬರ್ನಲ್ಲಿಯೇ ರಾಜೀನಾಮೆ ಸಲ್ಲಿಸಿದ್ದರು. ಇಲ್ಲಿ ಕೆಲಸ ಮಾಡುತ್ತಿರುವ ಕಿರಿಯ ಪತ್ರಕರ್ತರೂ ಹಲವರು ಸಂಸ್ಥೆಯನ್ನು ತೊರೆಯುತ್ತಿರುವುದಾಗಿ ವರದಿಯಾಗಿದೆ.
ವಿವಾದಿತ ಆ್ಯಂಕರ್!
ಈಗ ರಾಜೀನಾಮೆ ಕೊಟ್ಟಿರುವಶ್ರೀನಿವಾಸನ್ ಜೈನ್ 1995ರಿಂದಲೂ ಎನ್ಡಿಟಿವಿಯಲ್ಲಿಯೇ ಇದ್ದರು. 2003ರಿಂದ 2008ರವರೆಗೆ ಮುಂಬೈ ಬ್ಯೂರೋ ಚೀಫ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ಗ್ರೂಪ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪಡೆದಿದ್ದಾರೆ. ಇನ್ನೂ ಕೆಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಎನ್ಡಿಟಿವಿಯಲ್ಲಿ ಟ್ರುತ್ ವರ್ಸಸ್ ಹೈಪ್ ಎಂಬ ಕಾರ್ಯಕ್ರಮಕ್ಕೆ ಇವರೇ ನಿರೂಪಕರಾಗಿದ್ದರು. ಇದೆಲ್ಲದರ ಮಧ್ಯೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಈ ಹಿಂದೆ 2004ರ ಜೂನ್ 15ರಂದು ಮುಂಬಯಿ ಸಮೀಪದ ಮುಂಬ್ರಾ ನಿವಾಸಿ ಇಶ್ರಾತ್ ಜಹಾನ್ ಮತ್ತು ಆಕೆಯೊಂದಿಗೆ ಇದ್ದ ಜಾವೇದ್ ಶೇಖ್ ಅಲಿಯಾಸ್ ಪ್ರಣೇಶ್ ಪಿಲ್ಲೈ, ಅಮ್ಜದಲಿ ಅಕ್ಬರಲಿ ರಾಣಾ ಮತ್ತು ಜೀಶನ್ ಜೋಹರ್ ರನ್ನು ಗುಜರಾತ್ ಪೊಲಿಸರು ಅಹ್ಮದಾಬಾದ್ನಲ್ಲಿ ಗುಂಡಿಟ್ಟು ಕೊಂದಿದ್ದರು. ಇವರೆಲ್ಲ ಲಷ್ಕರೆ ತೊಯ್ಬಾ ಸಂಘಟನೆಯ ಉಗ್ರರಾಗಿದ್ದು, ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಹತ್ಯೆಗೈಯಲು ಪಿತೂರಿ ರೂಪಿಸಿಕೊಂಡು ಬಂದಿದ್ದರಿಂದ ಹತ್ಯೆಗೈದಿದ್ದಾಗಿ ಎನ್ಕೌಂಟರ್ ಮಾಡಿದ ಪೊಲೀಸರು ಹೇಳಿದ್ದರು. ಆ ವೇಳೆ ಶ್ರೀನಿವಾಸನ್ ಜೈನ್ ಅವರು ಇಶ್ರಾತ್ ಜಹಾನ್ ಪರವಾಗಿಯೇ ಮಾತನಾಡಿದ್ದರು. ‘ಆಕೆಯೇನೂ ನರೇಂದ್ರ ಮೋದಿಯನ್ನು ಕೊಲ್ಲಲು ಬಂದಿರಲಿಲ್ಲ. ಒಂದು ಸಣ್ಣ ಮಟ್ಟದ ಬಾಂಬ್ ಬ್ಲಾಸ್ಟ್ ಮಾಡಲು ಬಂದಿದ್ದಿರಬಹುದು. ಹಾಗಾಗಿ ಗುಜರಾತ್ ಪೊಲೀಸರು ಆಕೆಯನ್ನು ಚೆನ್ನಾಗಿಯೇ ನಡೆಸಿಕೊಳ್ಳಬೇಕಿತ್ತು. ಎನ್ಕೌಂಟರ್ ಮಾಡುವ ಅಗತ್ಯವಿರಲಿಲ್ಲ ಎಂದಿದ್ದರು. ಅಷ್ಟೇ ಅಲ್ಲ, ಸುದ್ದಿ ನಿರೂಪಣೆಯ ಭರದಲ್ಲಿ ‘ಭಯೋತ್ಪಾದನೆ ದೊಡ್ಡ ವಿಷಯವೇ ಅಲ್ಲ’ ಎಂಬಂತೆ ಬಿಂಬಿಸಿಬಿಟ್ಟಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ತಾವು ನಡೆಸಿಕೊಡುವ ಪ್ರತಿ ಚರ್ಚೆಯಲ್ಲೂ ಒಂದಲ್ಲ ಒಂದು ವಿವಾದ ಸೃಷ್ಟಿಸುವ ವಿಷಯಗಳನ್ನೇ ಹೇಳುತ್ತಿದ್ದರು. ಎಷ್ಟೋ ಸಲ ಅವರು ಡಿಬೇಟ್ಗಳಿಗೆ ಆಗಮಿಸಿದ ಅತಿಥಿಗಳ ಬಳಿಯೇ ಬೈಸಿಕೊಂಡಿದ್ದೂ ಇತ್ತು. ಹೀಗೆ ಯಾವುದೋ ಒಂದು ವಿಷಯಕ್ಕೆ ಪ್ರಸಿದ್ಧ ಹೂಡಿಕೆದಾರ (ಇತ್ತೀಚೆಗೆ ಮೃತಪಟ್ಟಿರುವ) ರಾಕೇಶ್ ಜುಂಜುನ್ವಾಲಾ ಕೂಡ ಈ ಶ್ರೀನಿವಾಸನ್ಗೆ ಬೈದಿದ್ದರು. ‘ನೀವು ತುಂಬ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಮಾಧ್ಯಮ ಕ್ಷೇತ್ರವೆಂಬುದು ಎಂದಿಗೂ ರಾಜಕೀಯ ಪಕ್ಷ ಸಾಕುವ ಪ್ರಾಣಿ ಆಗಬಾರದು. ನೀವು ಪೂರ್ವಾಗ್ರಹ ಪೀಡಿತರಾಗಬಾರದು’ ಎಂದು ಹೇಳಿದ್ದರು.
ಇತ್ತೀಚೆಗೆ ದ್ವೇಷ ಭಾಷಣ, ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ ಜೈಲಿಗೆ ಹೋಗಿದ್ದ ಆಲ್ಟ್ ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಜುಬೇರ್ಗೆ ಜಾಮೀನು ನೀಡಲು 50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ನೀಡಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೆ ಸ್ಪಷ್ಟನೆ ನೀಡಿ ‘ಆತ ನನ್ನ ಸ್ನೇಹಿತ’ ಎಂದು ಹೇಳಿದ್ದರು.
ಇದನ್ನೂ ಓದಿ: NDTV Adani deal | ಎನ್‌ಡಿಟಿವಿಗೆ ಅದಾನಿ ಮಾಲೀಕ, ಪ್ರಣಯ್ ರಾಯ್ ದಂಪತಿಯಿಂದ 602 ಕೋಟಿ ರೂ.ಗೆ ಷೇರು ಮಾರಾಟ